ಮಂಗಳೂರು: ಒಂದು ತಾಯಿ ಮಗು ಜತೆಗಿರುವ ಚಿತ್ರವೊಂದು ವೈರಲ್ ಆಗಿದೆ. ಆದರೆ ಅದಕ್ಕೆ ನೀಡಿರುವ ವಿವರಣೆಯ ಪ್ರಕಾರ, ಅದು ಪ್ರಧಾನಿ ನರೇಂದ್ರ ಮೋದಿಯವರು ಬಾಲ್ಯದಲ್ಲಿ ತಮ್ಮ ತಾಯಿ ಹೀರಾಬೆನ್ ಜೊತೆಗಿರುವ ಫೋಟೋ. ಈ ಕುರಿತು ಫ್ಯಾಕ್ಟ್ಇಂಡಿಯಾ ತಾಣವು ಸಂಶೋಧನೆ ನಡೆಸಿತು. ಈ ಸಂದರ್ಭ, ಕೆಲವರು ಇದೇ ಫೋಟೋವನ್ನು ಮಾಜಿ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್ ಕಲಾಂ ಅವರದು ಅಂತನೂ ಹಂಚಿಕೊಂಡಿದ್ದರು. ಆದರೆ, ಈ ಕುರಿತು ಫ್ಯಾಕ್ಟ್ಇಂಡಿಯಾ ಸಂಶೋಧನೆ ನಡೆಸಿದಾಗ, ಇವೆರಡೂ ಸುಳ್ಳು ಮಾಹಿತಿ ಎಂಬುದು ತಿಳಿದುಬಂತು.
ಫೇಸ್‌ಬುಕ್ ಸಾಮಾಜಿಕ ಜಾಲತಾಣದಲ್ಲಿ 2016ರಲ್ಲಿ, ಎ.ಪಿ.ಜೆ.ಅಬ್ದುಲ್ ಕಲಾಂ ಎಂಬ ಹೆಸರಿನ ಪ್ರೊಫೈಲ್‌ನಲ್ಲಿ ಮಾಡಿದ ಪೋಸ್ಚ್‌ನಲ್ಲಿ ಕೂಡ, ಈಕೆ ನನ್ನ ತಾಯಿ ಆಶಿಯಮ್ಮ ಜೈನುಲಬಿದೀನ್ ಎಂದು ಕಲಾಂ ಬರೆದಿರುವಂತೆ ತೋರಿಸಲಾಗಿತ್ತು.
ಇದಕ್ಕೂ ಮೊದಲೇ ಈ ಫೋಟೋ ನರೇಂದ್ರ ಮೋದಿ ಮತ್ತು ತಾಯಿ ಎಂಬ ಹೆಸರಿನಲ್ಲಿ ವೈರಲ್ ಆಗಿತ್ತು. ಬೇರೆ ಬೇರೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಬಾರಿ ಇದೇ ರೀತಿಯ ಹೇಳಿಕೆಯೊಂದಿಗೆ ಪೋಸ್ಟ್‌ಗಳು ಹರಿದಾಡಿದ್ದವು.
ಫೇಸ್‌ಬುಕ್ ಬಳಕೆದಾರ ಅರ್ಜುನ್ ಲಾಲ್ ಅವರು ಇತ್ತೀಚೆಗೆ ಜನವರಿ 11ರಂದು ಕೂಡ ಇದೇ ರೀತಿ ಅಪ್‌ಲೋಡ್ ಮಾಡಿದ್ದರು. ಈ ಮಗುವೇ 132 ಕೋಟಿ ಜನರನ್ನು ಸೆಳೆದವರು ಎಂಬರ್ಥದಲ್ಲಿ ಪೋಸ್ಟ್ ಮಾಡಲಾಗಿತ್ತು.
ಈ ಕುರಿತು ಫ್ಯಾಕ್ಟ್ಇಂಡಿಯಾ ತಾಣವು ಇಂಟರ್ನೆಟ್‌ನಲ್ಲಿ ಪರಿಶೀಲನೆ ನಡೆಸಿದಾಗ, ಪ್ರಮುಖ ಸುದ್ದಿ ತಾಣಗಳು ಕೂಡ ಇದೇ ಪೋಸ್ಟನ್ನು ನಂಬಿ, ಸುದ್ದಿ ರೂಪದಲ್ಲಿ ಪ್ರಕಟಿಸಿರುವುದು ಗಮನಕ್ಕೆ ಬಂತು.
ಹೀಗಾಗಿ, ಸತ್ಯಾಂಶವೇನೆಂದು ಜನರಿಗೆ ತಿಳಿಸಲು ನಾವು ಮುಂದಾದೆವು.
ಗೂಗಲ್‌ನಲ್ಲಿ ಇದೇ ಚಿತ್ರವನ್ನು ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಿದಾಗ, ಸಾಕಷ್ಟು ತಾಣಗಳು ಬೇಸ್ತು ಬಿದ್ದಿರುವುದು ಗಮನಕ್ಕೆ ಬಂದಿತು.
ನಂತರ, ಫೇಸ್‌ಬುಕ್‌ನಲ್ಲಿ ಕೂಡ ಇದೇ ರೀತಿಯ ಕೀವರ್ಡ್‌ಗಳನ್ನು ಮೂಲಕ ಹುಡುಕಾಟ ನಡೆಸಿದಾಗ, ಇದು ಮೋದಿ ಅಥವಾ ಕಲಾಂ ಬಾಲ್ಯದ ಫೋಟೋ ಅಲ್ಲ ಎಂಬುದು ತಿಳಿದುಬಂದಿತು.
ಫೇಸ್‌ಬುಕ್‌ನಲ್ಲಿ ತೆಲುಗು ವ್ಯಕ್ತಿಯೊಬ್ಬರು, ಇದು ತಮ್ಮ ಬಾಲ್ಯದ ಫೋಟೋ ಎಂದು 2011ರಲ್ಲಿ ಇಲ್ಲಿ ಹಾಗೂ 2016ರಲ್ಲಿ ಕೂಡ ಫೋಟೋ ಸಹಿತ ಬರೆದುಕೊಂಡಿದ್ದರು. ಅದರ ಲಿಂಕ್ ಇಲ್ಲಿದೆ.
ಇದೇ ಫೋಟೋವನ್ನು ತಪ್ಪು ಹೇಳಿಕೆಯ ಮೂಲಕ ಮೋದಿ ಅಥವಾ ಕಲಾಂ ಬಾಲ್ಯದ ಫೋಟೋ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡು, ತಪ್ಪು ದಾರಿಗೆ ಎಳೆಯಲಾಗಿತ್ತು. ಕೆಲವು ಪ್ರಮುಖ ಮಾಧ್ಯಮಗಳು, ಬ್ಲಾಗ್‌ಗಳು, ಟ್ವಿಟರ್ ಖಾತೆಗಳು, ಫೇಸ್‌ಬುಕ್ ಪೋಸ್ಟುಗಳಲ್ಲೆಲ್ಲಾ ತಪ್ಪು ಮಾಹಿತಿ ರವಾನೆಯಾಗಿತ್ತು.
ನಿರ್ಣಯ
ಹೀಗಿರಲಾಗಿ, ಕಲಾಂ ಬಾಲ್ಯದಲ್ಲಿ ಅಥವಾ ನರೇಂದ್ರ ಮೋದಿ ಬಾಲ್ಯದಲ್ಲಿ ತಂದೆ ತಾಯಿ ಸಹೋದರರೊಂದಿಗಿದ್ದ ಫೋಟೋ ಎಂದು ವೆಬ್ ತಾಣಗಳಲ್ಲಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಫೋಟೋ ಅವರದಲ್ಲ. ಅದು ತಪ್ಪು ಮಾಹಿತಿ. ಈ ಫೋಟೋ ಮರ್ಯಾಲ ಶ್ರೀನಿವಾಸ್ ಎಂಬ ತೆಲುಗು ವ್ಯಕ್ತಿಯದು.
0 ಕಾಮೆಂಟ್‌ಗಳು