Fact India

Fact India
Fact India: ನಕಲಿ ಸುದ್ದಿ ಹಾವಳಿಯ ನಡುವೆ ಕನ್ನಡದ ಪ್ರಥಮ ಫ್ಯಾಕ್ಟ್-ಚೆಕ್ ವೆಬ್ ತಾಣ |

ನೆಹರು ಸರಕಾರದ ತಪ್ಪಿನ ಪ್ರಾಯಶ್ಚಿತ್ತದ ನಿರೀಕ್ಷೆಯಲ್ಲಿ ಏರ್ ಇಂಡಿಯಾ

Air India back in Tatas fold

ಹಲವು ವರ್ಷಗಳಿಂದ ಭ್ರಷ್ಟಾಚಾರ ಹಾಗೂ ನಷ್ಟದ ಸಂಕಷ್ಟಗಳಿಂದ ನಲುಗುತ್ತಿದ್ದ ಏರ್ ಇಂಡಿಯಾ, ಕೊನೆಗೂ ಅದರ ಸೃಷ್ಟಿಕರ್ತ ಕಂಪನಿಗೆ ಮರಳಿದೆ ಮತ್ತು ಭಾರತೀಯ ವಾಯು ಕ್ಷೇತ್ರದಲ್ಲಿ ಹೊಸ ಯುಗದ ಆರಂಭಕ್ಕೆ ನಾಂದಿಯಾಗಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಏರ್ ಇಂಡಿಯಾ ಮಾರಾಟ ಮಾಡಿ, ದೊಡ್ಡ ತಪ್ಪು ಮಾಡಿದ್ದಾರೆ; ಭಾರತದ ವಾಯು ಕ್ಷೇತ್ರದ ಸರ್ವನಾಶಕ್ಕೆ ಕಾರಣವಾಗುತ್ತಿದ್ದಾರೆ ಎಂದೆಲ್ಲ ಒಂದು ಕಡೆಯಿಂದ ಕೂಗು ಎದ್ದಿದೆ. ಆದರೆ, ನರೇಂದ್ರ ಮೋದಿ ಅವರು ಟಾಟಾ ಕಂಪನಿಗೆ ಇದನ್ನು ಮಾರಾಟ ಮಾಡಿ, ನಮ್ಮ ದೇಶದ ಹೆಮ್ಮೆಯ ವಾಯು ಸೇವಾ ಸಂಸ್ಥೆಯನ್ನು ಉದ್ಧರಿಸಲು ಒತ್ತು ನೀಡಿದ್ದಾರೆ ಎಂಬುದು ಮನದಟ್ಟಾಗುತ್ತದೆ.

ಜಹಾಂಗೀರ್ ರತನ್‌ಜಿ ದಾದಾಭಾಯಿ ಟಾಟಾ ಅವರು 1932ರಲ್ಲಿ ಏರ್ ಇಂಡಿಯಾವನ್ನು ಹುಟ್ಟು ಹಾಕಿದ್ದರು. ಆದರೆ, 1953ರಲ್ಲಿ ಅಂದಿನ ಕಾಂಗ್ರೆಸ್ ಪ್ರಧಾನಿಯಾಗಿದ್ದ ಜವಾಹರಲಾಲ್ ನೆಹರು ಅವರು, ಟಾಟಾ ತೀವ್ರ ಪ್ರತಿರೋಧದ ನಡುವೆಯೂ ಅದನ್ನು ಸರಕಾರದ ತೆಕ್ಕೆಗೆ ಸೆಳೆದುಕೊಂಡು, ರಾಷ್ಟ್ರೀಕರಣಗೊಳಿಸಿ, ಅದನ್ನು ದೇಶೀಯ (ಇಂಡಿಯನ್ ಏರ್‌ಲೈನ್ಸ್) ಹಾಗೂ ಏರ್ ಇಂಡಿಯಾ (ಅಂತಾರಾಷ್ಟ್ರೀಯ) ವಿಭಾಗಗಳಾಗಿ ವಿಭಜಿಸಿದ್ದರು.

ಆಸಕ್ತಿದಾಯಕ ಸುದ್ದಿಗಳ ಸತ್ಯಾಂಶಕ್ಕಾಗಿ ನಮ್ಮನ್ನು ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲಿ ಫಾಲೋ ಮಾಡಿ.

ಅಂದಿನಿಂದಲೇ ಏರ್ ಇಂಡಿಯಾದ ಮಹಾರಾಜನ ಪತನ ನಿಧಾನವಾಗಿ ಆರಂಭವಾಗಿತ್ತು ಎಂಬುದು ಹಿನ್ನೋಟ ಹರಿಸಿದಾಗ ವೇದ್ಯವಾಗುತ್ತದೆ. ಮಹಾರಾಜ ಎಂಬುದು ಏರ್ ಇಂಡಿಯಾದ ಲಾಂಛನ. 1932ರಲ್ಲಿ ಏರ್ ಇಂಡಿಯಾ ತನ್ನ ಮೊದಲ ಹಾರಾಟವನ್ನು ಕರಾಚಿಯಿಂದ ಬಾಂಬೇಗೆ ಪ್ರಾರಂಭಿಸಿತ್ತು. ಇದೀಗ 89 ವರ್ಷಗಳ ಬಳಿಕ ಏರ್ ಇಂಡಿಯಾ ಮಾತೃ ಸಂಸ್ಥೆಗೆ ಮರಳಿದಂತಾಗಿದೆ. ಇದು ಭಾರತೀಯ ನಾಗರಿಕ ವಿಮಾನಯಾನ ಇತಿಹಾಸದಲ್ಲಿ ಮತ್ತೊಂದು ಮೈಲಿಗಲ್ಲು.

ನೆಹರು ಅವರು ಏರ್ ಇಂಡಿಯಾವನ್ನು ರಾಷ್ಟ್ರೀಕರಿಸಿದಾಗ, ಜೆಆರ್‌ಡಿ ಟಾಟಾ ಅವರು ಇದರ ವಿರುದ್ಧ ಬಲವಾಗಿ ಪ್ರತಿರೋಧಿಸಿದ್ದರು. ಭಾರತೀಯ ವಿಮಾನಯಾನದ ಜನಕ ಎಂದೇ ಹೇಳಬಹುದಾದ ಜೆಆರ್‌ಡಿ ಟಾಟಾ ಅವರು, ಟಾಟಾವನ್ನು ಸರಕಾರ ಕಿತ್ತುಕೊಂಡ ಬಳಿಕ, ಟಾಟಾ ಗ್ರೂಪ್ ಕಂಪನಿಗಳಿಗಿಂತಲೂ ಹೆಚ್ಚಾಗಿ ಏರ್ ಇಂಡಿಯಾ ಬಗ್ಗೆಯೇ ಯೋಚನೆಗೀಡಾಗಿದ್ದರು ಮತ್ತು ಚಿಂತಿಸುತ್ತಲೇ ಹೆಚ್ಚು ಸಮಯ ಕಳೆಯುತ್ತಿದ್ದರು ಎಂದು ಟಾಟಾ ಗ್ರೂಪ್ ಮೇಲ್ಮಟ್ಟದ ಅಧಿಕಾರಿಗಳು ಖಾಸಗಿಯಾಗಿ ಹೇಳಿದ್ದರು.

1953ರಲ್ಲಿ ನೆಹರು ಅವರು ಟಾಟಾರಿಂದ ಏರ್ ಇಂಡಿಯಾ ಕಿತ್ತುಕೊಂಡಾಗಲೇ ಸ್ವಾತಂತ್ರ್ಯೋತ್ತರ ಕಾಲದಲ್ಲಿ ಪ್ರಥಮ ಪ್ರಧಾನಿ ನೆಹರು ಆಡಳಿತದ ದಿಕ್ಕುದೆಸೆ ಏನೆಂಬುದು ಜನರ ಅರಿವಿಗೆ ಬರತೊಡಗಿತ್ತು ಎಂದು ವಿತ್ತೀಯ ಸಲಹೆಗಾರರಾಗಿದ್ದ ಮತ್ತು ದೇಶದ ವಿತ್ತೀಯ ವ್ಯವಹಾರಗಳ ಮೇಲೆ ಆಸಕ್ತಿ ಇರುವ ಚಾರ್ಟರ್ಡ್ ಅಕೌಂಟೆಂಟ್ ಅಲೋಕ್ ಭಟ್ ಬರೆಯುತ್ತಾರೆ. ಅವರ ಪ್ರಕಾರ, ನೆಹರು ಸರಕಾರದ ಈ ನಿರ್ಧಾರದಿಂದಾಗಿ ಏರ್ ಇಂಡಿಯಾಕ್ಕಿಂತಲೂ ಹೆಚ್ಚು ಬೆಲೆ ತೆತ್ತದ್ದು ಭಾರತೀಯರು!

ಜೆಆರ್‌ಡಿ ಟಾಟಾ ಅವರ ಕಣ್ಣೀರೇ ಈ ಹೇಳಿಕೆಗೆ ಸಾಕ್ಷಿ. ಸ್ವಾತಂತ್ರ್ಯೋತ್ತರ ಕಾಲದಲ್ಲಿ ಜವಾಹರಲಾಲ್ ನೆಹರು ನೇತೃತ್ವದ ಸರಕಾರದ ಆರ್ಥಿಕ ಮತ್ತು ವ್ಯಾವಹಾರಿಕ ನೀತಿಗಳು ಭಾರತಕ್ಕೆ ಜೀವಮಾನಪೂರ್ತಿಯ ಕಾಯಿಲೆಯಾಗಿ ಕಾಡತೊಡಗಿತ್ತು ಎಂದೆಲ್ಲ ಆರೋಪಿಸುವವರಿಗೆ ಏರ್ ಇಂಡಿಯಾದ ರಾಷ್ಟ್ರೀಕರಣವೇ ಪ್ರಬಲ ಸಾಕ್ಷಿಯಾಗಿ ಕಾಣತೊಡಗಿತ್ತು.

ಜಾಗತಿಕವಾಗಿ ವಿಮಾನಯಾನ ವ್ಯವಹಾರವನ್ನೇ ಮರುವ್ಯಾಖ್ಯಾನಿಸಿದ ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯು ಹಲವಾರು ಪ್ರಥಮಗಳಿಗೆ ಸಾಕ್ಷಿಯಾಗಿತ್ತು. ಆದರೆ, ಸರಕಾರದ ತೆಕ್ಕೆಗೆ ಹೋಗಿದ್ದೇ ತಡ, ಅದರ ಹೆಸರು ಅಸಮರ್ಥತೆ, ಸೇವಾ ಕೊರತೆ, ಭ್ರಷ್ಟಾಚಾರ, ಭಾರಿ ದುರಾಡಳಿತ ಮತ್ತು ಎಂದಿಗೂ ಮುಗಿಯದ ನಷ್ಟ - ಇವುಗಳ ಪ್ರತಿರೂಪವಾಗತೊಡಗಿತು. ಏರ್ ಇಂಡಿಯಾ ಯಾಕೆ ವಿಫಲವಾಯಿತು ಎಂಬುದರ ಬಗ್ಗೆ ಸಾಕಷ್ಟು ಮಂದಿ ಬರೆದಿದ್ದಾರೆ. ಅಂತರಜಾಲದಲ್ಲಿ ಹುಡುಕಿದರೆ ಏರ್ ಇಂಡಿಯಾದೊಳಗಿನ ಭ್ರಷ್ಟಾಚಾರ, ಸೇವಾ ನ್ಯೂನತೆಗಳ ಬಗ್ಗೆ ಗೇಲಿಯ ಮಾತುಗಳು ಸಾಕಷ್ಟು ಕೇಳಿಬರುತ್ತವೆ.

ಅದುವರೆಗೂ ಏರ್ ಇಂಡಿಯಾ ಜಾಗತಿಕವಾಗಿ ತನ್ನ ಸೇವೆಗಳಿಗಾಗಿ, ದಕ್ಷತೆಗಾಗಿ, ಅಚ್ಚುಕಟ್ಟುತನಕ್ಕಾಗಿ ಹೆಸರು ಗಳಿಸಿತ್ತು. ಅದರ ಸಮಯ ದಕ್ಷತೆ ಎಷ್ಟಿತ್ತೆಂದರೆ, ಏರ್ ಇಂಡಿಯಾ ವಿಮಾನಗಳು ಲ್ಯಾಂಡ್ ಆಗಿದ್ದನ್ನು ಕೇಳಿಯೇ ಜನರು ಸಮಯ ಎಷ್ಟೆಂದು ಹೇಳುತ್ತಿದ್ದರೆಂಬ ಮಾತು ಆ ಕಾಲದಲ್ಲಿ ಚಾಲ್ತಿಯಲ್ಲಿತ್ತು. ಇದೇ ಸೇವಾ ದಕ್ಷತೆಯೇ ರಾತ್ರಿ ಕಾಲದಲ್ಲಿ ಏರ್ ಮೇಲ್ ಸೌಲಭ್ಯ ನೀಡುವ ಕುರಿತಾಗಿ ಜೆಆರ್‌ಡಿ ಟಾಟಾ ಹಾಗೂ ನೆಹರೂ ಸಂಪುಟದ ಸಚಿವ ರಫಿ ಅಹ್ಮದ್ ಕಿದ್ವಾಯಿ ನಡುವೆ ತಿಕ್ಕಾಟಕ್ಕೆ ಕಾರಣವಾಗಿತ್ತು. ಇದೇ ತಿಕ್ಕಾಟವೇ ಮೂಲವಾಗಿ, ಸರಕಾರವು ಖಾಸಗಿ ವಿಮಾನಯಾನ ಸಂಸ್ಥೆಗಳ ರಾಷ್ಟ್ರೀಕರಣಕ್ಕೆ ಮುಂದಾಯಿತು ಮತ್ತು ಆ ಕಾಲದಲ್ಲಿ ಅತೀವೇಗವಾಗಿ ಬೆಳೆಯುತ್ತಿದ್ದ ಉದ್ಯಮ ಕ್ಷೇತ್ರವೊಂದರ ಮರಣ ಶಾಸನ ಬರೆಯಲು ಕಾರಣವಾಯಿತು.

ಏರ್ ಇಂಡಿಯಾವನ್ನೇ ನೆಪವಾಗಿಟ್ಟುಕೊಂಡು, ಅದರ ಆಧಆರದಲ್ಲೇ ಬ್ಯಾಂಕಿಂಗ್, ವಿಮೆ ಮತ್ತು ಗಣಿ ಕ್ಷೇತ್ರಗಳಲ್ಲಿಯೂ ಸರಕಾರವು ಖಾಸಗೀಕರಣಕ್ಕೆ ಮುಂದಾಯಿತು. ಖಾಸಗಿ ಸಂಸ್ಥೆಗಳು ತಮ್ಮ ದಕ್ಷ ದುಡಿಮೆಯಿಂದ ಸಂಪಾದಿಸಿದ ಆಸ್ತಿಯೇ ನೆಹರು ಸರಕಾರದ ಕೆಂಗಣ್ಣಿಗೆ ಗುರಿಯಾಯಿತು.

1950ರ ದಶಕದಲ್ಲಿ ಭಾರತೀಯ ವಿಮಾನಯಾನ ಕ್ಷೇತ್ರವು ವೇಗವಾಗಿ ಬೆಳೆಯಲಾರಂಭಿಸಿತ್ತು. 48 ಡಕೋಟಾ ವಿಮಾನಗಳೊಂದಿಗೆ ಖಾಸಗಿ ವಿಮಾನ ಸಂಸ್ಥೆಗಳು ದೇಶದ ಉದ್ದಗಲಕ್ಕೂ ಸಂಚರಿಸುತ್ತಿದ್ದವು. ಅದಕ್ಕೂ ಮೊದಲೇ 1940ರ ಡಿಸೆಂಬರ್ 23ರಂದು ವಾಲ್‌ಚಂದ್ ಹೀರಾಚಂದ್ ಅವರು ಬೆಂಗಳೂರಿನಲ್ಲಿ ಹಿಂದೂಸ್ತಾನ್ ಏರ್‌ಕ್ರಾಫ್ಟ್ಸ್ ಲಿಮಿಟೆಡ್ (HAL) ಸ್ಥಾಪಿಸಿದ್ದರೆ, 1942ರಲ್ಲಿ ಜೆಆರ್‌ಡಿ ಟಾಟಾ ಅವರೂ ಟಾಟಾ ಏರ್‌ಕ್ರಾಫ್ಟ್ ಸಂಸ್ಥೆಯನ್ನು ಸ್ಥಾಪಿಸಿ, ವಿಮಾನಗಳ ತಯಾರಿ ಆರಂಭಿಸಿದಾಗಲೇ ಭಾರತೀಯ ವಾಯುಯಾನ ಕ್ಷೇತ್ರದ ಏಳಿಗೆ ಆರಂಭವಾಗಿತ್ತು.

ಟಾಟಾ ಯೋಜನೆಗೆ ಅಂದಿನ ಬ್ರಿಟಿಷ್ ಸರಕಾರವು ನೀಡಿದ್ದ ಗುತ್ತಿಗೆಯನ್ನು ವಾಪಸ್ ಪಡೆದುಕೊಂಡು ಆಘಾತ ನೀಡಿದ್ದರೆ, HAL ನ ಧಾವಂತಕ್ಕೆ ಭಾರತ ಸರಕಾರವು 1941ರಲ್ಲಿ ಮೂರನೇ ಒಂದು ಭಾಗದ ಪಾಲನ್ನು ವಶಪಡಿಸಿಕೊಂಡು, ನಂತರ 1951ರಲ್ಲಿ ಅದರ ಸಂಪೂರ್ಣ ರಾಷ್ಟ್ರೀಕರಣಗೊಳಿಸುವ ಮೂಲಕ, ಪೂರ್ತಿಯಾಗಿ ಕಡಿವಾಣ ಹಾಕಿತು. ವಿಮಾನಯಾನ ಕಂಪನಿಗಳ ರಾಷ್ಟ್ರೀಕರಣವು, ಅದಾಗಲೇ ಜಾಗತಿಕವಾಗಿ ಹೆಸರು ಮಾಡಿ, ವಾಣಿಜ್ಯ ವಿಮಾನಗಳನ್ನು ನಿರ್ಮಿಸಿ, ಮತ್ತಷ್ಟು ಬೆಳಗುವ ಸಾಧ್ಯತೆಯಿದ್ದ ಭಾರತೀಯ ವಿಮಾನಯಾನ ಉದ್ಯಮಕ್ಕೇ ಅಂತಿಮ ಮೊಳೆ ಬಡಿಯಿತು.

ತೀರಾ ಇತ್ತೀಚೆಗೆ ಎಂದು ಹೇಳಬಹುದಾದಂತೆ 21ನೇ ಶತಮಾನದಲ್ಲಿ ಭಾರತೀಯ ಆರ್ಥಿಕತೆಯು ಜಾಗತಿಕ ಉದಾರೀಕರಣಕ್ಕೆ ಒಳಪಟ್ಟಿತು. ಇದರಿಂದಾಗಿ, ಸರಕಾರದ ಹಿಡಿತದಲ್ಲಿ ಏಕಸ್ವಾಮ್ಯದಿಂದ ಮೆರೆಯುತ್ತಿದ್ದ ಏರ್ ಇಂಡಿಯಾ ಮತ್ತು ಇಂಡಿಯನ್ ಏರ್‌ಲೈನ್ಸ್ - ಎರಡು ಕೂಡ ಖಾಸಗಿ ಕಂಪನಿಗಳ ಉಚ್ಛ್ರಾಯದ ಹೊಡೆತಕ್ಕೆ ಸಿಲುಕಿ ನಲುಗಿತು. ಖಾಸಗಿ ಕಂಪನಿಗಳ ದಕ್ಷ ಕಾರ್ಯಾಚರಣೆಯಿಂದಾಗಿ, ಏರ್ ಇಂಡಿಯಾ-ಇಂಡಿಯನ್ ಏರ್‌ಲೈನ್ಸ್ ಮಾರುಕಟ್ಟೆ ಪಾಲು ಏರು-ಪೇರು ಕಾಣುತ್ತಲೇ ಇತ್ತು. 2006-07ರಲ್ಲಿ ಏರ್ ಇಂಡಿಯಾ 541 ಕೋಟಿ ಹಾಗೂ ಇಂಡಿಯನ್ ಏರ್‌ಲೈನ್ಸ್ 230 ಕೋಟಿ ನಷ್ಟ ದಾಖಲಿಸುವ ಮೂಲಕ ಎರಡೂ ವಿಮಾನಯಾನ ಸಂಸ್ಥೆಗಳ ಕುಸಿತ ತೀವ್ರಗೊಂಡಿತು. ಈ ನಷ್ಟದ ತೀವ್ರತೆ ತಗ್ಗಿಸಲು 2007ರ ಜುಲೈ 15ರಂದು ಅಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು ಎರಡೂ ಸಂಸ್ಥೆಗಳನ್ನು ವಿಲೀನಗೊಳಿಸಿತು.

ಅಂದಿನ ಸರಕಾರದ ನೀತಿಗಳಿಂದಾಗಿ ಎರಡೂ ಸಂಸ್ಥೆಗಳ ನಷ್ಟವು ಮೊದಲ ವರ್ಷದಲ್ಲೇ 2,226 ಕೋಟಿಗೆ ಏರಿಕೆಯಾಯಿತು. 2007 ಹಾಗೂ 2009ರ ನಡುವೆ ಈ ನಷ್ಟದ ಪ್ರಮಾಣವು ಆಘಾತಕಾರಿಗಾಯಿ 7,200 ಕೋಟಿ ರೂ. ತಲುಪಿತು. 2010ರ ಮಾರ್ಚ್ ಅಂತ್ಯಕ್ಕೆ ಏರ್ ಇಂಡಿಯಾದ ಒಟ್ಟಾರೆ ನಷ್ಟವು 38,423 ಕೋಟಿಗೆ ಏರಿತು! ಆ ಬಳಿಕ ಯುಪಿಎ ಸರಕಾರವು ನಷ್ಟದಲ್ಲಿರುವ ಈ ಸಂಸ್ಥೆಯನ್ನು ಪಾರು ಮಾಡಲು ಪ್ಯಾಕೇಜ್ ನೀಡಿತು. ಅಂದಿನಿಂದ 34,000 ಕೋಟಿ ರೂ. ತೆರಿಗೆದಾರರ ಹಣವನ್ನು ಏರ್ ಇಂಡಿಯಾದ ಪುನಶ್ಚೇತನಕ್ಕೆ ಒದಗಿಸಲಾಯಿತು.

ವಿಲೀನಗೊಂಡಂದಿನಿಂದಲೂ ನಷ್ಟ ಹೆಚ್ಚಿಸುತ್ತಲೇ ಹೋದ ಏರ್ ಇಂಡಿಯಾ ದ ನಷ್ಟದ ಒಟ್ಟು ಪ್ರಮಾಣ 2020 ಮಾರ್ಚ್ ಅಂತ್ಯದ ವೇಳೆಗೆ 70,820 ಕೋಟಿ ರೂ ಆಗಿದ್ದು, 2021ನೇ ಹಣಕಾಸು ವರ್ಷದಲ್ಲಿ ಇನ್ನೂ ಸುಮಾರು 10 ಸಾವಿರ ಕೋಟಿ ಹೆಚ್ಚಳವಾಗುವ ಆತಂಕವಿತ್ತು.

ಅಂದರೆ ಒಟ್ಟು ಸುಮಾರು 80 ಸಾವಿರ ಕೋಟಿ ಅಂತ ಲೆಕ್ಕ ಹಾಕಿದರೂ, ಇದೇ ಹಣವು ಐದಾರು ರೈಲ್ವೇ ಯೋಜನೆಗಳನ್ನೇ ಪೂರೈಸಲು ಸಾಕಾಗುತ್ತಿತ್ತು. ಅಥವಾ ಸುಮಾರು ಐದಾರು ಸಾವಿರ ಕಿ.ಮೀ. ಉದ್ದದ ಷಟ್ಪಥ ಇಲ್ಲವೇ 9 ಸಾವಿರ ಕಿ.ಮೀ. ಚತುಷ್ಪಥ ಹೆದ್ದಾರಿ ನಿರ್ಮಾಣಕ್ಕೆ ಸಾಕಾಗುತ್ತಿತ್ತು!

ಏರ್ ಇಂಡಿಯಾಕ್ಕಾಗಿ ನನ್ನೆಲ್ಲ ಆಲೋಚನೆಗಳು, ಶಕ್ತಿ ಮತ್ತು ಸಮಯವನ್ನೆಲ್ಲ ವಿನಿಯೋಗಿಸಿದ್ದೆ ಮತ್ತು ಅದರ ಬಗ್ಗೆ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದೆ. ಇದೀಗ ಅವೆಲ್ಲವೂ ಕೊನೆಗೊಂಡಿದೆ. ನಾವು ಆರಂಭಿಸಿದ್ದ ಯೋಜನೆ ವಿಫಲವಾಗಲಿಲ್ಲ ಮತ್ತು ಮುಂದುವರಿಯುತ್ತದೆ ಎಂಬ ಆಶಾವಾದವೇ ನನ್ನ ಈ ದುಃಖಕ್ಕೆ ಕೊಂಚವಾದರೂ ಸಮಾಧಾನ ತರುತ್ತದೆ ಎಂದು ಜೆಆರ್‌ಡಿ ಟಾಟಾ ಅವರು ಅಂದು ಏರ್ ಇಂಡಿಯಾ ಮಂಡಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದರು.

ಈಗ ಜೆಆರ್‌ಡಿ ಟಾಟಾ ಅವರ ಆ ಕನಸನ್ನು ನನಸಾಗಿಸಲು ರತನ್ ಟಾಟಾ ಸಜ್ಜಾಗಿದ್ದಾರೆ. ಏರ್ ಇಂಡಿಯಾ ಮತ್ತೆ ತನ್ನ ಗತವೈಭವಕ್ಕೆ ಮರಳಲು ಸಕಲ ಸಿದ್ಧತೆ ನಡೆಸುತ್ತಿದೆ ಎಂಬುದು ಭಾರತೀಯರ ಆಶಾವಾದ, ನಿರೀಕ್ಷೆ. ಅಂದಿನ ಬ್ಲಂಡರ್ ಅನ್ನು ಸರಿಪಡಿಸುವ ಎಲ್ಲ ಲಕ್ಷಣಗಳು ಟಾಟಾ ಆಡಳಿತವು ತೋರಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು