Fact India

Fact India
Fact India: ನಕಲಿ ಸುದ್ದಿ ಹಾವಳಿಯ ನಡುವೆ ಕನ್ನಡದ ಪ್ರಥಮ ಫ್ಯಾಕ್ಟ್-ಚೆಕ್ ವೆಬ್ ತಾಣ |

Fact Check: ಹಾಲು ಮಾರುವವ 800 ಮಕ್ಕಳ ಅಪ್ಪ; ಡಿಎನ್ಎ ಪರೀಕ್ಷೆ ಫಲಿತಾಂಶವೂ ಹೇಳಿದ್ದು ನಿಜವೇ?


ಕ್ಯಾಲಿಫೋರ್ನಿಯಾದ ಸ್ಯಾನ್ ಡೀಗೋ ಎಂಬಲ್ಲಿ ಹಾಲು ಮಾರಾಟಗಾರನೊಬ್ಬ 1951-1964ರ ನಡುವೆ 800 ಮಕ್ಕಳನ್ನು ಹುಟ್ಟಿಸಿದ್ದಾನೆ ಎಂಬ ಸುದ್ದಿಯೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಾಗೂ ಕೆಲವು ವೆಬ್ ಸೈಟುಗಳಲ್ಲಿಯೂ ಸುಮಾರು ಹತ್ತು ದಿನಗಳಿಂದ ವೈರಲ್ ಆಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ ಸುದ್ದಿ ಹೀಗಿತ್ತು.

ವಿಷಯವೇನೆಂದರೆ, ಹಾಲು ಮಾರಾಟಗಾರ ರ‍್ಯಾಂಡಲ್ (ರ‍್ಯಾಂಡಿ) ಜೆಫ್ರೀಸ್ (Randall (Randy) Jeffries) ಎಂಬಾತ, ಸ್ಯಾನ್ ಡೀಗೋದಲ್ಲಿ ಪ್ರತಿದಿನ ಬೆಳಿಗ್ಗೆ ಹಾಲು ಮಾರುತ್ತಿದ್ದ. ಆ ಕಾಲದಲ್ಲಿ ಹಾಲಿನ ಪ್ಯಾಕೆಟುಗಳಿರಲಿಲ್ಲ, ಹೀಗಾಗಿ ಈತನೇ ಖುದ್ದಾಗಿ ಹೊತ್ತುಕೊಂಡು ವಿತರಿಸುತ್ತಿದ್ದ. ನೋಡಲು ಸುಂದರನಾಗಿದ್ದ. ಸ್ಥಳೀಯ ಗೃಹಿಣಿಯರೆಲ್ಲರೂ ಈತನ ರೂಪ, ವ್ಯಕ್ತಿತ್ವದಿಂದ ಆಕರ್ಷಿತರಾಗಿದ್ದರು. ಹೀಗಾಗಿ ಅನೈತಿಕ ಸಂಬಂಧವೂ ಏರ್ಪಡುತ್ತಿತ್ತು. ಆ ಕಾಲದಲ್ಲಿ ಇವನ್ನೆಲ್ಲ ಪತ್ತೆ ಹಚ್ಚುವ ತಂತ್ರಜ್ಞಾನವೂ ಇರಲಿಲ್ಲ. ಹೀಗಂತ ಸುದ್ದಿಯಲ್ಲಿ ಬರೆಯಲಾಗಿತ್ತು.

ಆ ಪ್ರದೇಶದಲ್ಲಿ ಕೆಲವರ ಹುಟ್ಟಿನ ಬಗ್ಗೆ ಸಂದೇಹ ಕಂಡುಬಂದ ಕಾರಣದಿಂದಾಗಿ, ಆ ಪರಿಸರದಲ್ಲಿ ಓಡಾಡಿದ್ದ ಈತನನ್ನೂ ವಿಚಾರಿಸಲಾಗಿತ್ತು. ಕೊನೆಗೆ 97ರ ಹರೆಯದ ರ‍್ಯಾಂಡಲ್‌ನನ್ನು ಡಿಎನ್‍ಎ ಪರೀಕ್ಷೆಗೆ ಒಳಪಡಿಸಿದಾಗ ವಿಷಯ ತಿಳಿದಿದ್ದೇನೆಂದರೆ, 800ಕ್ಕೂ ಮಕ್ಕಳ ಡಿಎನ್ಎ ಜೊತೆ ಈತನ ಡಿಎನ್ಎ ಹೋಲಿಕೆ ಕಂಡುಬಂದಿತ್ತು. ನೂರಾರು ಪರೀಕ್ಷೆಗಳನ್ನು ನಡೆಸಲಾಗಿತ್ತು ಎಂದು ಸುದ್ದಿ ಹೇಳಿತ್ತು.

"ನಾನು ಷಂಡನೆಂದೇ ಇದುವರೆಗೂ ತಿಳಿದಿದ್ದೆ. ನನಗಂತೂ ವೈವಾಹಿಕ ಜೀವನದಲ್ಲಿ ಯಾವುದೇ ಮಕ್ಕಳು ಹುಟ್ಟಿಲ್ಲ. ಈಗ 97ರ ಹರೆಯದಲ್ಲಿ ಈ ಸುದ್ದಿ ಕೇಳಿದಾಗ ಖುಷಿ! ಈಗಂತೂ ನಾನು ಪರಿಪೂರ್ಣ ವ್ಯಕ್ತಿ. ಈ ಎಲ್ಲಾ ಮಕ್ಕಳನ್ನೂ ಒಮ್ಮೆ ನೋಡುವಾಸೆಯಿದೆ" ಎಂಬ ಆತನ ಹೇಳಿಕೆಯೂ ಡೈಲಿ ನ್ಯೂಸ್ ರಿಪೋರ್ಟೆಡ್ ಎಂದು ಪ್ರಕಟವಾಗಿದೆ.

ಫೋಟೋ ಸಂದೇಹಾಸ್ಪದ

ಜೊತೆಗೆ, ಈ ಸುದ್ದಿಯೊಂದಿಗೆ ಬಳಸಿದ ಚಿತ್ರವನ್ನು ಗೂಗಲ್‌ನ ರಿವರ್ಸ್ ಇಮೇಜ್ ಸರ್ಚ್ ವಿಧಾನ ಬಳಸಿ ಹುಡುಕಿದಾಗ, ಅದೇ ಫೋಟೋ ಬಳಸಿದ ಸಾಕಷ್ಟು ಲಿಂಕುಗಳು ಗೋಚರಿಸಿದವು. ಅವುಗಳಲ್ಲಿ ಪೂರ್ಣ ಗುಣಮಟ್ಟದ ಮತ್ತು ಮೂಲವೆಂದು ಹೇಳಬಹುದಾದ ಚಿತ್ರವೊಂದು (ಬೇರೆಲ್ಲವೂ ಕಡಿಮೆ ಗುಣಮಟ್ಟದವು) ಗಮನ ಸೆಳೆಯಿತು. ಇದು ಜಾಲತಾಣಿಗರಿಗೆ ಉಚಿತವಾಗಿ ಚಿತ್ರಗಳನ್ನು ಒದಗಿಸುವ ಸ್ಟಾಕ್ ಚಿತ್ರಗಳಿರುವ ವೆಬ್ ಸೈಟು. ಇದರಿಂದಾಗಿ, ಸುದ್ದಿಯಲ್ಲಿರುವ ಚಿತ್ರ ವಿಶ್ವಾಸಾರ್ಹವಲ್ಲ ಎಂಬ ಸಂದೇಹ ಬಲವಾಯಿತು. ಇಲ್ಲಿದೆ ಫೋಟೋ. 

ಪತ್ತೆ ಮಾಡಿದ ವಿಧಾನ

ಸತ್ಯಾಂಶ ಕಂಡುಹುಡುಕುವ ನಿಟ್ಟಿನಲ್ಲಿ ಸಂಬಂಧಿಸಿದ ಪ್ರಮುಖ ಕೀವರ್ಡ್‌ಗಳನ್ನು ಬಳಸಿ ಗೂಗಲ್‌ನಲ್ಲಿ ಹುಡುಕಿದಾಗ ಸಾಕಷ್ಟು ಜಾಲತಾಣಗಳಲ್ಲಿ ಈ ಸುದ್ದಿ ಪ್ರಕಟವಾಗಿರುವುದು ಗೊತ್ತಾಯಿತು. ಡಿಸೆಂಬರ್ ತಿಂಗಳಿಂದಲೇ ಈ ರೀತಿಯಲ್ಲಿ ಸಾಕಷ್ಟು ಪೋಸ್ಟುಗಳು ಹರಿದಾಡಿದ್ದವು. ಯಾವುದೇ ಪ್ರಮುಖ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಗಳ ಜಾಲತಾಣಗಳಲ್ಲಿ ಈ ಸುದ್ದಿಯೇ ಇಲ್ಲ ಎಂಬುದು ಸಂದೇಹವನ್ನು ಮತ್ತಷ್ಟು ಬಲವಾಗಿಸಿತು.

ಲಭ್ಯವಾದ ಹಲವಾರು ಲಿಂಕುಗಳಲ್ಲಿ ಇತ್ತೀಚಿನ ಸುದ್ದಿಗಳನ್ನು ಬಿಟ್ಟು, ತೀರಾ ಹಳೆಯ ಸುದ್ದಿ ಇದೆಯೇ ಎಂದು ಹುಡುಕಾಡಿದಾಗ ಕಂಡುಬಂದ ಲಿಂಕ್ ಇದು. 

ಈ ಸುದ್ದಿ  ಪ್ರಕಟವಾಗಿದ್ದು 2021ರ ಡಿಸೆಂಬರ್ 24ರಂದು. ಈ  ವೆಬ್ ತಾಣದ ಹೆಸರೇ ಡೈಲಿ ನ್ಯೂಸ್ ರಿಪೋರ್ಟೆಡ್ (ಇಂಗ್ಲಿಷ್ ಸುದ್ದಿಗಳಲ್ಲಿ ಸಾಮಾನ್ಯವಾಗಿ ಯಾವುದಾದರೂ ಸುದ್ದಿಯನ್ನು ಬೇರೆ ತಾಣಗಳಿಂದ ತೆಗೆದುಕೊಂಡರೆ ರಿಪೋರ್ಟೆಡ್ ಎಂದು ಬರೆಯುತ್ತಾರೆ. ಅದೇ ರೀತಿ ಇಲ್ಲಿಯೂ Daily News Reported ಅಂತಲೇ ಇತ್ತು.) ..

ಇದರ About Us ವಿಭಾಗವನ್ನು ಪರಿಶೀಲಿಸಿದಾಗ, ವಿಷಯ ಸ್ಪಷ್ಟವಾಯಿತು. ಇದು ಕಪೋಲಕಲ್ಪಿತ, ವಿಡಂಬನಾ ಸುದ್ದಿಗಳನ್ನೇ ಪ್ರಕಟಿಸುವ ಜಾಲತಾಣ ಎಂದು ಈ ವಿಭಾಗದಲ್ಲಿ ಅವರೇ ಹೇಳಿಕೊಂಡಿದ್ದಾರೆ. ಇದನ್ನು ಆಧಿರಿಸಿ ವಿವಿಧ ಜಾಲತಾಣಗಳು ಸುದ್ದಿ ಪ್ರಕಟಿಸಿಬಿಟ್ಟಿದ್ದವು. ಆದರೆ About Us ವಿಭಾಗವನ್ನು ಓದಿರಲಿಲ್ಲ.

ಫಲಿತಾಂಶ:

ಕ್ಯಾಲಿಫೋರ್ನಿಯಾದಲ್ಲಿ ಹಾಲು ಮಾರುವವನೊಬ್ಬ 800ಕ್ಕೂ ಹೆಚ್ಚು ಮಕ್ಕಳಿಗೆ ಅಪ್ಪನಾಗಿದ್ದ ಎಂಬ ಸುದ್ದಿಯು ನಿಜವಲ್ಲ. ಅದೊಂದು ವಿಡಂಬನಾತ್ಮಕ ತಾಣದ ಕಾಲ್ಪನಿಕ ಸುದ್ದಿಯಷ್ಟೇ ಆಗಿದ್ದು, ಅವನ್ನೇ ಕೆಲವು ಜಾಲತಾಣಗಳು ನಿಜ ಸುದ್ದಿ ಎಂಬಂತೆ ಪ್ರಕಟಿಸಿವೆ ಎಂಬುದು ಖಚಿತವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು