Fact India

Fact India
Fact India: ನಕಲಿ ಸುದ್ದಿ ಹಾವಳಿಯ ನಡುವೆ ಕನ್ನಡದ ಪ್ರಥಮ ಫ್ಯಾಕ್ಟ್-ಚೆಕ್ ವೆಬ್ ತಾಣ |

Hijab Row: ಕೇರಳದಲ್ಲಿ ಹಿಜಬ್, ಪೂರ್ಣ ತೋಳಿನ ಉಡುಪಿಗೆ ನಿಷೇಧವಾಗಿದ್ದೇಕೆ ಗೊತ್ತೇ?

ಹಿಜಾಬ್ - ಕೇಸರಿ ಶಲ್ಯ ವಿದ್ಯಾರ್ಥಿಗಳ ಪ್ರತಿಭಟನೆ
ವಿದ್ಯೆ ಕಲಿಯಬೇಕಾದ ಮಕ್ಕಳು ರಾಜಕೀಯದ ದಾಳಗಳಾಗುತ್ತಿರುವುದು

ಕರ್ನಾಟಕದಲ್ಲಿ ಎಂದೂ ಇಲ್ಲದ ವಿವಾದವೊಂದು ಇದೀಗ ಶಾಲಾ-ಕಾಲೇಜುಗಳ ಅಂಗಳದಲ್ಲಿ ಮುಗ್ಧ ವಿದ್ಯಾರ್ಥಿಗಳ ಮನಸ್ಸು ಹಾಳು ಮಾಡುತ್ತಿದೆ. ವಿದ್ಯೆ ಕಲಿತು ಭವಿಷ್ಯದ ಸತ್ಪ್ರಜೆಗಳಾಗುವ ಬದಲು ಈ ವಿದ್ಯಾರ್ಥಿಗಳು ಯಾರದ್ದೋ ಕೈಗೊಂಬೆಯಾಗಿ, ಸಮಾಜ ಒಡೆಯುವ ಮುಂದಾಳುಗಳಾಗಿ ರೂಪುಗೊಳ್ಳುವ ಲಕ್ಷಣಗಳು ಗೋಚರಿಸುತ್ತಿವೆ. ಹಾಗಿದ್ದರೆ, ಮುಸ್ಲಿಂ ಪ್ರಾಬಲ್ಯವಿರುವ ಮತ್ತು ಕಮ್ಯೂನಿಸ್ಟ್ - ಕಾಂಗ್ರೆಸ್ ಸರಕಾರಗಳೇ ಆಳ್ವಿಕೆ ನಡೆಸಿರುವ ಕೇರಳದಲ್ಲಿ ಹಿಜಬ್ ನಿಷೇಧಕ್ಕೆ ಸಂಬಂಧಿಸಿ ಏನಾಗಿತ್ತು?ಮಾಹಿತಿ ಇಲ್ಲಿದೆ.

ಇದು 2019ರ ಘಟನೆ. ಆ ವರ್ಷದ ಏಪ್ರಿಲ್ 17ರಂದು, ದೇಶದಲ್ಲಿ 150ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ಅತಿದೊಡ್ಡ ವಿದ್ಯಾಸಂಸ್ಥೆಗಳಲ್ಲಿ ಒಂದಾಗಿರುವ ಮುಸ್ಲಿಂ ಎಜುಕೇಶನಲ್ ಸೊಸೈಟಿ (MES), ತನ್ನ ಎಲ್ಲ ಕಾಲೇಜುಗಳ ಆಡಳಿತ ಮಂಡಳಿಗಳಿಗೆ ಸುತ್ತೋಲೆಯೊಂದನ್ನು ಹೊರಡಿಸಿ, ವಿದ್ಯಾರ್ಥಿನಿಯರು ಯಾರೂ ಮುಖವನ್ನು ಮುಚ್ಚಿಕೊಳ್ಳುವ ಶಾಲು ಅಥವಾ ವಸ್ತ್ರವನ್ನು ಧರಿಸದಂತೆ ನೋಡಿಕೊಳ್ಳಿ ಎಂದು ಸೂಚಿಸಿತು.

ಆಸಕ್ತಿದಾಯಕ ಸುದ್ದಿಗಳ ಸತ್ಯಾಂಶಕ್ಕಾಗಿ ನಮ್ಮನ್ನು ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲಿ ಫಾಲೋ ಮಾಡಿ.

ಮತ್ತು, ಇಂಥದ್ದೊಂದು ಆದೇಶ ಹೊರಬೀಳಲು ಕಾರಣವಾದ ಇಬ್ಬರು ವಿದ್ಯಾರ್ಥಿನಿಯರಿಗೆ ಒಂದಿಡೀ ವರ್ಷ ಶಾಲೆಗೇ ಹೋಗಲು ಸಾಧ್ಯವಾಗಲಿಲ್ಲ.

2018-19ರ ಶೈಕ್ಷಣಿಕ ವರ್ಷದಿಂದ ಉದ್ದತೋಳಿನ ಉಡುಗೆ ಧರಿಸುವಂತಿಲ್ಲ ಎಂದು ತಿರುವನಂತಪುರ ಸಮೀಪದ ತಿರುವಳ್ಳಂನಲ್ಲಿರುವ ಕ್ರೈಸ್ಟ್ ನಗರ ಸೀನಿಯರ್ ಸೆಕೆಂಡರಿ ಶಾಲೆಯು ಹೇಳಿದಾಗ ಇಬ್ಬರು ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯರ ತಂದೆ ಮೊಹಮದ್ ಸುನಿರ್ ಎಂಬವರು ನ್ಯಾಯಾಲಯದ ಮೊರೆ ಹೋಗಿದ್ದರು. ಗಿಡ್ಡಕೈ ಉಡುಪನ್ನು ಇಸ್ಲಾಂ-ವಿರೋಧಿ ಎಂಬುದು ಅವರ ವಾದವಾಗಿತ್ತು.

2018ರ ಡಿಸೆಂಬರ್ ತಿಂಗಳಲ್ಲಿ ನ್ಯಾಯಾಧೀಶರಾದ ನ್ಯಾ.ಮೂ. ಮುಹಮದ್ ಮುಷ್ತಾಕ್ ಅವರ ಏಕಸದಸ್ಯ ಪೀಠವು ತೀರ್ಪು ನೀಡಿ, ಸಂಸ್ಥೆಯೊಂದರ ವಿಶಾಲ ಹಿತಾಸಕ್ತಿಯ ಎದುರು ಅರ್ಜಿದಾರರು ವೈಯಕ್ತಿಕ ಹಕ್ಕುಗಳಿಗೆ ಅನುಮತಿ ಕೇಳುವಂತಿಲ್ಲ ಎಂದು ಹೇಳಿತಲ್ಲದೆ, ವಸ್ತ್ರ ಸಂಹಿತೆಯನ್ನು ರೂಪಿಸಲು ಶೈಕ್ಷಣಿಕ ಸಂಸ್ಥೆಗೆ ಹಕ್ಕಿದೆ ಎಂದು ತಿಳಿಸಿತು.

ಪ್ರಾಂಶುಪಾಲರಾದ ಫಾದರ್ ಮ್ಯಾಥ್ಯೂ ಚಕ್ಕಲಕ್ಕಲ್ ಅವರು ಈ ಮಕ್ಕಳಿಗೆ ಆ ವರ್ಷದ ಮಟ್ಟಿಗೆ ಓದಲು ಅವಕಾಶ ಕೊಟ್ಟರಾದರೂ, ಮುಂದಿನ ಶೈಕ್ಷಣಿಕ ವರ್ಷದಿಂದ ಸಮವಸ್ತ್ರ ಕಡ್ಡಾಯವಾಗಿ ಧರಿಸಬೇಕು ಎಂದು ತಾಕೀತು ಮಾಡಿದರು. ಹೀಗಾಗಿ 7ನೇ ಹಾಗೂ 3ನೇ ತರಗತಿ ಕಲಿಯುತ್ತಿದ್ದ ತನ್ನ ಮಕ್ಕಳನ್ನು ಸುನಿರ್ ಅವರು ಆ ವರ್ಷ ಶಾಲೆಗೆ ಕಳುಹಿಸಲಿಲ್ಲ.

ನ್ಯಾ.ಮೂ.ಮುಷ್ತಾಕ್ ಅವರು ತಮ್ಮ ಆದೇಶದಲ್ಲಿ, ಈಗೆಲ್ಲರೂ ಹಿಜಾಬ್ ಸಮರ್ಥನೆಗಾಗಿ ಸದ್ದು ಮಾಡುತ್ತಿರುವ ಸಂವಿಧಾನದ 25(1) ವಿಧಿಯ ಬಗ್ಗೆ ಸ್ಪಷ್ಟವಾಗಿ ವಿವರಿಸಿದ್ದಾರೆ. ತಮ್ಮ ಧರ್ಮದ ಆಧಾರದಲ್ಲಿ ಅಗತ್ಯ ಎಂದಾದರೆ ತಮಗೆ ಬೇಕಾದ ಉಡುಪು ಧರಿಸುವ ಮೂಲಭೂತ ಹಕ್ಕು ಮಹಿಳೆಗೆ ಇದೆ. ಆದರೆ, ಶೈಕ್ಷಣಿಕ ಸಂಸ್ಥೆಯೊಂದನ್ನು ಸ್ಥಾಪಿಸುವ, ನಿರ್ವಹಿಸುವ ನಿಭಾಯಿಸುವುದು ಕೂಡ ಸಂವಿಧಾನದ 19ನೇ ವಿಧಿಯ ಅನುಸಾರ ಮೂಲಭೂತ ಹಕ್ಕು. "ಸಾರ್ವಜನಿಕ ವ್ಯವಸ್ಥೆ, ನೈತಿಕತೆ ಮತ್ತು ಸಮಾಜದ ಆರೋಗ್ಯ ಹಾಗೂ ಇತರ ವಿಚಾರಗಳಿಗೆ ಸಂವಿಧಾನದ 25ನೇ ವಿಧಿಯು ಒಳಪಟ್ಟಿರುತ್ತದೆ" ಎಂದು ಸಂವಿಧಾನ ಹೇಳುತ್ತದೆ.

ಇಷ್ಟೇ ಅಲ್ಲ, ತೀರಾ ಇತ್ತೀಚೆಗೆ ಕೇರಳ ಸರಕಾರವೇ ಸ್ಟೂಡೆಂಟ್ ಪೊಲೀಸ್ ಕೆಡೆಟ್ (ಎಸ್‌ಪಿಸಿ) ಸಮವಸ್ತ್ರದಲ್ಲಿ, ಹಿಜಾಬ್ ಮತ್ತು ತುಂಬುತೋಳಿನ ಉಡುಪಿಗೆ ಅವಕಾಶವಿಲ್ಲ. ಇದು ಜಾತ್ಯತೀತತೆ ಮತ್ತು ಪೊಲೀಸ್ ಪಡೆಯ ಶಿಸ್ತಿಗೆ ವಿರುದ್ಧವಾದುದು ಎಂದು ಹೇಳಿ, ನಿಷೇಧಿಸಿತ್ತು.

ಕೋಯಿಕ್ಕೋಡ್ ಜಿಲ್ಲೆಯ ಜಿಜಿಎಚ್‌ಎಸ್ ಕುಟ್ಟಿಯಾಡಿಯ 8ನೇ ತರಗತಿ ವಿದ್ಯಾರ್ಥಿನಿ ರಿಜಾ ನಹಾನ್ ಎಂಬಾಕೆ, ಎಸ್‌ಪಿಸಿ ಸಮವಸ್ತ್ರವನ್ನು ಪ್ರಶ್ನಿಸಿ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದಳು.  ನ್ಯಾಯಾಲಯವು ವಿಷಯವನ್ನು ಕೇರಳ ಗೃಹ ಇಲಾಖೆಗೆ ಹಸ್ತಾಂತರಿಸಿತ್ತು. ಎಸ್‌ಪಿಸಿ ಎಂಬುದು ಕೇರಳ ಪೊಲೀಸ್ ಇಲಾಖೆಯ ಭಾಗ. ಇದನ್ನು ಗೃಹ ಮತ್ತು ಶಿಕ್ಷಣ ಇಲಾಖೆಗಳು ಜಂಟಿಯಾಗಿ ನಿಭಾಯಿಸುತ್ತವೆ. ಇದರಲ್ಲಿ ಸಮವಸ್ತ್ರಗಳು ಯಾವುದೇ ಧಾರ್ಮಿಕ ಗುರುತಗಳಿಂದ ಅತೀತವಾಗಿರಬೇಕು ಎಂದು ಕೇರಳ ಸರಕಾರವು ಹೇಳಿದೆ. ಎಸ್‌ಪಿಸಿ ಎಂಬುದು ಸ್ವಇಚ್ಛೆಯಿಂದ ಸೇರಬಹುದಾದ ಸಂಸ್ಥೆಯಾಗಿದ್ದು, ಕಡ್ಡಾಯ ಪಠ್ಯೇತರ ಚಟುವಟಿಕೆಯಲ್ಲ ಎಂದಿದೆ ಸರಕಾರ.

ಹೊರ ದೇಶಗಳಲ್ಲಿ ಹೇಗಿದೆ?

ಬುರ್ಖಾ, ವೇಲ್ ಅಥವಾ ಹಿಜಾಬ್, ನಿಖಾಬ್ ನಿಷೇಧದ ಬಗ್ಗೆ ಭಾರತದಲ್ಲಿ ಮಾತ್ರವೇ ಸದ್ದಾಗಿರುವುದಲ್ಲ. ಹೊರ ದೇಶಗಳಲ್ಲಿಯೂ ಕೆಲವೆಡೆಯಂತೂ ನಿಷೇಧವನ್ನೇ ಮಾಡಲಾಗಿದೆ.

ಇಕನಾಮಿಕ್ ಟೈಮ್ಸ್ ವರದಿಯಂತೆ, ಕಳೆದ ವರ್ಷ ಸ್ವಿಜರ್ಲೆಂಡ್ ನಿಖಾಬ್ (ಕಣ್ಣುಗಳು ಮಾತ್ರ ಕಾಣುವಂತೆ ಮುಖ ಮುಚ್ಚುವ ವೇಲ್) ಅನ್ನು ನಿಷೇಧಿಸಿತ್ತು. ಯೂರೋಪ್‌ನ ಇತರೆಡೆಯೂ ನಿಷೇಧವಿದೆ. ಫ್ರಾನ್ಸ್‌ನಲ್ಲಿ 2010ರಲ್ಲೇ ಬುರ್ಖಾ (ಮುಖ ಪೂರ್ತಿ ಮುಚ್ಚುವಂತೆ ಇರುವ ಉಡುಪು) ನಿಷೇಧಿಸಿತ್ತು. ಅಲ್ಲಿ ಬುರ್ಖಾ ಧರಿಸಿದರೆ 150 ಯೂರೋವರೆಗೂ ದಂಡ ವಿಧಿಸಲಾಗುತ್ತದೆ. 2011ರಲ್ಲಿ ಬೆಲ್ಜಿಯಂನಲ್ಲಿ ಸಾರ್ವಜನಿಕವಾಗಿ ಬುರ್ಖಾ ಧಾರಣೆಯನ್ನು ನಿಷೇಧಿಸಿ, ತಪ್ಪಿತಸ್ಥರಿಗೆ ಏಳು ದಿನದ ವರೆಗೆ ಕಾರಾಗೃಹ, ಅಥವಾ ದಂಡ ಶಿಕ್ಷೆ ಘೋಷಿಸಿತ್ತು. 2016ರಲ್ಲಿ ಬಲ್ಗೇರಿಯಾ, 2017ರಲ್ಲಿ ಆಸ್ಟ್ರಿಯಾ, 2018ರಲ್ಲಿ ಡೆನ್ಮಾರ್ಕ್‌ಗಳು ಕೂಡ ಇದನ್ನು ಅನುಸರಿಸಿದವು. 2019ರಲ್ಲಿ ಡೆನ್ಮಾರ್ಕ್‌ನಲ್ಲಿ ಪೂರ್ಣವಾಗಿ ನಿಷೇಧ ಮಾಡಿಲ್ಲವಾದರೂ, ಸಾರ್ವಜನಿಕ ಸಂಸ್ಥೆಗಳು, ಆಸ್ಪತ್ರೆಗಳು, ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಇದರ ಬಳಕೆಯನ್ನು ನಿಷೇಧಿಸಿತು. ನಾರ್ವೇ ದೇಶದಲ್ಲಿ ಶಾಲೆಗಳು ಮತ್ತು ನರ್ಸರಿಗಳಲ್ಲಿ ಸಿಬ್ಬಂದಿಗಳು ಬುರ್ಖಾ ಧರಿಸುವುದನ್ನು ನಿಷೇಧಿಸಲಾಗಿದೆ. ಜರ್ಮನಿಯಲ್ಲಿ, ಪೌರ ಸೇವಕರು ಮತ್ತು ಅಧಿಕಾರಿಗಳು (ನ್ಯಾಯಾಧೀಶರು, ಸೈನಿಕರೂ ಸೇರಿದಂತೆ) ಮುಖವನ್ನು ಕಾಣಿಸುವಂತೆ ಇರಬೇಕು.

ಇದೀಗ ಮುಸ್ಲಿಮರ ಹಕ್ಕುಗಳ ಕುರಿತಾಗಿ ಧ್ವನಿಯೆತ್ತಿರುವ ಇದೇ ಕಾಂಗ್ರೆಸ್ ಮುಖ್ಯಮಂತ್ರಿಯೊಬ್ಬರು, ಹಿಂದೂಗಳ ಘೂಂಘಟ್ (ಮಹಿಳೆಯರ ಶಾಲು) ಧರಿಸುವ ಹಕ್ಕಿನ ಬಗ್ಗೆ ಅಂದು ಹೇಳಿದ್ದ ವಿಚಾರ ಮತ್ತೆ ಸದ್ದು ಮಾಡುತ್ತಿದೆ. ಅವರ ಪ್ರಕಾರ, ಒಬ್ಬ ಮಹಿಳೆಯನ್ನು ಘೂಂಘಟ್‌ನಲ್ಲಿ ಬಂಧಿಸಿಡಲು ಆ ಸಮಾಜಕ್ಕೆ ಯಾವ ಅಧಿಕಾರವಿದೆ? ಘೂಂಘಟ್ ಎಲ್ಲಿವರೆಗೆ ಇರುತ್ತದೆಯೋ ಅಲ್ಲಿಯವರೆಗೆ ಮಹಿಳೆಯರು ಮುಂದೆ ಬರುವುದಿಲ್ಲ. ಘೂಂಘಟ್‌ನ ಕಾಲ ಈಗಿಲ್ಲ ಎಂದಿದ್ದರು.

ಇದೀಗ ಅವರದೇ ಬಾಸ್ (ಕಾಂಗ್ರೆಸ್ ಮುಖಂಡ) ರಾಹುಲ್ ಗಾಂಧಿ, ಸಿದ್ದರಾಮಯ್ಯ, ಶಶಿ ತರೂರ್ ಮುಂತಾದವರ ಟ್ವೀಟ್‌ಗಳು, ಇದಕ್ಕೆ ತದ್ವಿರುದ್ಧವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು