Fact India

Fact India
Fact India: ನಕಲಿ ಸುದ್ದಿ ಹಾವಳಿಯ ನಡುವೆ ಕನ್ನಡದ ಪ್ರಥಮ ಫ್ಯಾಕ್ಟ್-ಚೆಕ್ ವೆಬ್ ತಾಣ |

ಯಾರನ್ನೂ ಟೀಕಿಸ್ತಿಲ್ಲ, ವ್ಯಾಟ್ ತಗ್ಗಿಸಿ ಅಂತ ಕೇಳ್ಕೋತೀನಿ: ಪೆಟ್ರೋಲ್ ಡೀಸೆಲ್ ದರ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದಿಷ್ಟೇ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಏನೇ ಹೇಳಿದರೂ ಅದನ್ನು ಋಣಾತ್ಮಕವಾಗಿಯೇ ಪರಿಗಣಿಸುವ ವಿರೋಧ ಪಕ್ಷಗಳ ಪ್ರತಿಕ್ರಿಯೆಯು ಜನರ ದಾರಿತಪ್ಪಿಸುವುದರತ್ತಲೇ ಸೀಮಿತವಾಗಿದೆ ಎಂಬುದಕ್ಕೆ ಮತ್ತೊಂದು ಉದಾಹರಣೆಗೆ ಇಲ್ಲಿದೆ.

ಬುಧವಾರ ನರೇಂದ್ರ ಮೋದಿ ಅವರು ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ನಡೆಸಿದ ಸಂವಾದದಲ್ಲಿ ಮಾತನಾಡುತ್ತಾ, ರಾಷ್ಟ್ರದ ಹಿತದೃಷ್ಟಿಯಿಂದ ಪೆಟ್ರೋಲ್-ಡೀಸೆಲ್ ಮೇಲಿನ ವ್ಯಾಟ್ ಕಡಿತ ಮಾಡಿ ಎಂದು ಮನವಿ ಮಾಡಿಕೊಂಡಿದ್ದರು. ವಿಶೇಷವಾಗಿ ವಿರೋಧ ಪಕ್ಷಗಳ ಆಳ್ವಿಕೆಯಿರುವ ರಾಜ್ಯಗಳಿಗೆ ಒತ್ತು ನೀಡಿ ಅವರು ಈ ಹೇಳಿಕೆ ನೀಡಿದ್ದರು.

ಆಸಕ್ತಿದಾಯಕ ಸುದ್ದಿಗಳ ಸತ್ಯಾಂಶಕ್ಕಾಗಿ ನಮ್ಮನ್ನು ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲಿ ಫಾಲೋ ಮಾಡಿ.

ಇದು ಜಾಗತಿಕ ಸಮಸ್ಯೆ. ಹೀಗಾಗಿ, ಕಳೆದ ನವೆಂಬರ್ ತಿಂಗಳಲ್ಲಿ ಅಬಕಾರಿ ಸುಂಕವನ್ನು ಕೇಂದ್ರವು ಕಡಿತಗೊಳಿಸಿದ ಸಂದರ್ಭದಲ್ಲಿ, "ನೀವೂ ವ್ಯಾಟ್ ಕಡಿತಗೊಳಿಸಿ, ಅಬಕಾರಿ ಸುಂಕ ಕಡಿತದ ಲಾಭವನ್ನು ಪ್ರಜೆಗಳಿಗೆ ವರ್ಗಾಯಿಸಿ" ಎಂಬ ತಮ್ಮ ಮನವಿಗೆ ಹಲವು ರಾಜ್ಯಗಳು ಸ್ಪಂದಿಸಿಲ್ಲ. ಹೀಗೆ ಮಾಡುವುದು ಅನ್ಯಾಯ ಮತ್ತು ಸಮೀಪದ ರಾಜ್ಯಗಳಿಗೆ ಅಪಾಯಕಾರಿ ಎಂದೂ ಮೋದಿ ಹೇಳಿದರು.

ಕೋವಿಡ್-19 ಮತ್ತೆ ಹೆಚ್ಚಳವಾಗುತ್ತಿರುವ ಕುರಿತು ಮುಖ್ಯಮಂತ್ರಿಗಳೊಂದಿಗೆ ಸಮಾಚೋಲನೆಗಾಗಿ ಈ ಸಭೆ ಕರೆಯಲಾಗಿದ್ದರೂ, ಭಾರಿ ಚರ್ಚೆಗೆ ಗ್ರಾಸವಾಗಿರುವ ಇಂಧನದ ದರ ಏರಿಕೆಯ ಕುರಿತು ತಮ್ಮ ಭಾಷಣದಲ್ಲಿ ನರೇಂದ್ರ ಮೋದಿ ಹೆಚ್ಚಿನ ಗಮನ ಹರಿಸಿದ್ದರು.

ಕೋವಿಡ್-19, (ಉಕ್ರೇನ್) ಯುದ್ಧಗಳಿಂದಾಗಿ ಜಾಗತಿಕ ಆರ್ಥಿಕತೆಗೆ ಸಮಸ್ಯೆಯಾಗಿದೆ. ಇಂಥ ಪರಿಸ್ಥಿತಿಯಲ್ಲಿ ಒಕ್ಕೂಟ ವ್ಯವಸ್ಥೆಯು ಪರಸ್ಪರ ಸಹಕಾರದಿಂದ ಭಾರತೀಯ ಆರ್ಥಿಕತೆಯನ್ನು ಬಲಪಡಿಸಲು ಶ್ರಮಿಸಬೇಕಿದೆ. ಮತ್ತು ಹಣಕಾಸು ನೀತಿ ರೂಪಣೆಗಳಲ್ಲಿ ಕೇಂದ್ರ ಮತ್ತು ರಾಜ್ಯಗಳ ಸಮನ್ವಯ ಅಗತ್ಯವಿದೆ ಎಂದರು ಮೋದಿ.

ಜನರ ಮೇಲೆ ಹೊರೆ ಕಡಿಮೆ ಮಾಡುವುದಕ್ಕಾಗಿ ನವೆಂಬರ್ ತಿಂಗಳಲ್ಲಿ ಪೆಟ್ರೋಲ್-ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕೇಂದ್ರವು ಕಡಿತ ಮಾಡಿದೆ. ಇದರ ಪ್ರಯೋಜನವನ್ನು ಜನರಿಗೆ ದಾಟಿಸಲು ರಾಜ್ಯಗಳು ವ್ಯಾಟ್ ಕಡಿಮೆ ಮಾಡಬೇಕು. ಕೆಲವು ರಾಜ್ಯಗಳು ಮಾಡಿವೆ, ಕೆಲವು ಇನ್ನೂ ಮಾಡಿಲ್ಲ. ಕೇಂದ್ರದ ಈ ಹೆಜ್ಜೆಯಿಂದ ಪ್ರೇರಣೆ ಪಡೆದು ಹೆಚ್ಚಿನ ಬಿಜೆಪಿ ಆಳ್ವಿಕೆಯ ರಾಜ್ಯಗಳು ವ್ಯಾಟ್ ಕಡಿತಗೊಳಿಸಿವೆ. ವಿರೋಧ-ಪಕ್ಷಗಳ ಆಳ್ವಿಕೆಯಿರುವ ಬಹುತೇಕ ರಾಜ್ಯಗಳು ವ್ಯಾಟ್ ಕಡಿತಗೊಳಿಸಿಲ್ಲ. ದೆಹಲಿಯ ಆಮ್ ಆದ್ಮೀ ಪಕ್ಷದ ಸರಕಾರವು ತಡವಾಗಿಯಾದರೂ ಮಾಡಿದೆ ಎಂದು ಮೋದಿ ಹೇಳಿದರು.

ಬಿಜೆಪಿ ಆಡಳಿತದ ಕರ್ನಾಟಕ ಮತ್ತು ಗುಜರಾತ್, ಎರಡೂ ರಾಜ್ಯಗಳು ವ್ಯಾಟ್ ಕಡಿತಗೊಳಿಸಿದ ಪರಿಣಾಮ ಅನುಕ್ರಮವಾಗಿ 3500-4000 ಕೋಟಿ ಹಾಗೂ 5000 ಕೋಟಿ ರೂ. ಆದಾಯ ನಷ್ಟ ಅನುಭವಿಸಿವೆ. ಜನರಿಗೆ ಪ್ರಯೋಜನವಾಗಲು ಅವರು ಈ ರೀತಿ ಮಾಡಿದ್ದಾರೆ, ಆದರೆ ನೆರೆಯ ರಾಜ್ಯಗಳು ಮಾಡಿಲ್ಲ ಎಂದು ಮೋದಿ ಹೇಳಿದರು.

ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಕೇರಳ - ಇವೆಲ್ಲವೂ ವಿವಿಧ ವಿರೋಧ ಪಕ್ಷಗಳ ಆಳ್ವಿಕೆಯಲ್ಲಿರುವ ರಾಜ್ಯಗಳು. ಅಲ್ಲಿ ಯಾವುದೋ ಕಾರಣಕ್ಕೆ ಅವರು ವ್ಯಾಟ್ ತಗ್ಗಿಸಿಲ್ಲ. ಹೀಗಾಗಿ ಅಲ್ಲಿ ಬೇರೆ ರಾಜ್ಯಗಳಿಗಿಂತ ಬೆಲೆಗಳು ಜಾಸ್ತಿ ಇವೆ ಎಂದರು.

"ನಾನು ಯಾರನ್ನೂ ಟೀಕಿಸುತ್ತಿಲ್ಲ, ಆದರೆ ನಿಮ್ಮ ರಾಜ್ಯಗಳ ಜನರ ಕಲ್ಯಾಣಕ್ಕಾಗಿ ನಾನು ಪ್ರಾರ್ಥಿಸುತ್ತೇನೆ. ಆರು ತಿಂಗಳು ತಡವಾದರೂ ಪರವಾಗಲಿಲ್ಲ, ಈಗಲಾದರೂ ವ್ಯಾಟ್ ಕಡಿತಗೊಳಿಸಿ. ಇದರಿಂದ ಜನರಿಗೆ ಉಪಯೋಗವಾಗುತ್ತದೆ" ಎಂದು ನರೇಂದ್ರ ಮೋದಿ ಹೇಳಿದರು.

ಬೇರೆ ರಾಜ್ಯಗಳಲ್ಲಿ ಎಷ್ಟಿದೆ?

ಚೆನ್ನೈ (ತಮಿಳುನಾಡು), ಜೈಪುರ (ರಾಜಸ್ಥಾನ), ಹೈದರಾಬಾದ್ (ತೆಲಂಗಾಣ), ಕೋಲ್ಕತಾ (ಪಶ್ಚಿಮ ಬಂಗಾಳ) ಮತ್ತು ಮುಂಬಯಿ (ಮಹಾರಾಷ್ಟ್ರ)ಗಳಲ್ಲಿ ಅನುಕ್ರಮವಾಗಿ ಲೀಟರ್ ಪೆಟ್ರೋಲ್ ಬೆಲೆಯು 111, 118, 119, 115 ಹಾಗೂ 120 ಇದೆ. ದಾಮನ್ ಮತ್ತು ದಿಯು ಕೇಂದ್ರಾಡಳಿತ ಪ್ರದೇಶದಲ್ಲಿ 102, ಲಖನೌನಲ್ಲಿ 105, ಜಮ್ಮುವಿನಲ್ಲಿ 106, ಗುವಾಹಟಿಯಲ್ಲಿ 105 ಹಾಗೂ ಡೆಹ್ರಾಡೂನ್‌ನಲ್ಲಿ 103 ರೂ. ಇದೆ ಎಂದು ಮೋದಿ ವಿವರಿಸಿದರು.

ಕೇಂದ್ರ ಸರಕಾರವು ಹೇಗಿದ್ದರೂ ಶೇ.42ರಷ್ಟು ಆದಾಯವನ್ನು ರಾಜ್ಯಗಳಿಗೆ ಹಂಚುತ್ತದೆ ಎಂದು ಹೇಳಿದ ಮೋದಿ, ವ್ಯಾಟ್ ತಗ್ಗಿಸುವಂತೆ ಇದು ತಮ್ಮ "ವಿಶೇಷ ಮನವಿ" ಎಂದೂ ಒತ್ತಿ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಹೇಳಿದ್ದು ಇಷ್ಟೇ. ಆದರೆ, ವಿರೋಧ ಪಕ್ಷಗಳು ಅವರ ಈ ಹೇಳಿಕೆಗೆ ಕೆಂಡಾಮಂಡಲವಾಗಿವೆ ಮತ್ತು ಕೇಂದ್ರವೇ ಎಲ್ಲಕ್ಕೂ ಕಾರಣ ಎಂದು ದೂಷಿಸುತ್ತಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು