Fact India

Fact India
Fact India: ನಕಲಿ ಸುದ್ದಿ ಹಾವಳಿಯ ನಡುವೆ ಕನ್ನಡದ ಪ್ರಥಮ ಫ್ಯಾಕ್ಟ್-ಚೆಕ್ ವೆಬ್ ತಾಣ |

Fact Check: Himalaya ಔಷಧಿ ಸಂಸ್ಥೆ ಮುಸ್ಲಿಂ ಒಡೆತನದ್ದೇ? ರಿಲಯನ್ಸ್, ಪತಂಜಲಿ ಬಹಿಷ್ಕಾರಕ್ಕೆ ಕರೆ ನೀಡಿದರೇ?

ಮುಸ್ಲಿಂ ಒಡೆತನದ ಔಷಧ ಕಂಪನಿ “ಹಿಮಾಲಯ”ದ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಒಂದು ವರ್ಗವು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಪ್ರಚಾರ ನಡೆಸುತ್ತಿದೆ. #BoycottHimalayaProducts ಹ್ಯಾಶ್ ಟ್ಯಾಗ್ ಮೂಲಕ ಆನ್‌ಲೈನ್‌ನಲ್ಲಿ ಸಾಕಷ್ಟು ಆಂದೋಲನ ನಡೆಸಲಾಗುತ್ತಿದೆ. ಇದಕ್ಕೆ ಮೂಲ ಕಾರಣ, ಹಿಮಾಲಯ ಕಂಪನಿಯ ಹಲಾಲ್ ನೀತಿಯ ಪೋಸ್ಟ್ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವುದು. ಹಿಮಾಲಯದ ಕಂಪನಿಯ ಹಲಾಲ್ ನೀತಿಯ ಪ್ರಕಾರ, ಔಷಧೋತ್ಪನ್ನಗಳು ಇಸ್ಲಾಮಿಕ್ ಕಾನೂನು ಅಥವಾ ಶರಿಯಾಕ್ಕೆ ಅನುಗುಣವಾಗಿದೆ ಮತ್ತು ಹಲಾಲ್ ಉತ್ಪನ್ನಗಳನ್ನು ಬಳಸಿ ಮಾತ್ರವೇ ಔಷಧಗಳನ್ನು ತಯಾರಿಸಲಾಗುತ್ತಿದೆ ಎಂಬುದು.

ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಬಹಿಷ್ಕಾರ ಆಂದೋಲನ ಆರಂಭವಾದ ಬಳಿಕ ಎಚ್ಚೆತ್ತುಕೊಂಡಿರುವ ಹಿಮಾಲಯ ಕಂಪನಿಯು ಸ್ಪಷ್ಟನೆ ನೀಡಿದ್ದು, “ಕೆಲವು ದೇಶಗಳಲ್ಲಿರುವ ನೀತಿ ನಿಯಮಗಳ ಪ್ರಕಾರ ಹಲಾಲ್ ಪ್ರಮಾಣಪತ್ರವನ್ನು ಪಡೆದಿದ್ದೇವೆ, ಉತ್ಪನ್ನಗಳ ರಫ್ತಿಗೆ ಇದು ಪೂರಕವಾಗಿದೆ” ಎಂದಿದೆ. ಇಲ್ಲಿದೆ ಟ್ವೀಟ್.


ಆದರೆ ಈ ಮಧ್ಯೆ, ಮಾ.29ರಂದು ಒಂದು ವಿಡಿಯೊ ವೈರಲ್ ಆಯಿತು. ರಿಲಯನ್ಸ್ ಜಿಯೋ, ರಿಲಯನ್ಸ್ ಪೆಟ್ರೋಲ್ ಪಂಪ್‌ನಿಂದ ಪೆಟ್ರೋಲ್ ಖರೀದಿ ಮತ್ತು ಪತಂಜಲಿ ಉತ್ಪನ್ನಗಳನ್ನು ಬಹಿಷ್ಕರಿಸಬೇಕು, ಇವೆಲ್ಲ ಆರೆಸ್ಸೆಸ್‌ಗೆ ಸೇರಿದ ಕಂಪನಿಗಳು, ಮುಸ್ಲಿಮರಿಗೆ ವಿರುದ್ಧ ಅಂತೆಲ್ಲ ಒಬ್ಬ ವ್ಯಕ್ತಿ ಭಾಷಣ ಬಿಗಿಯತ್ತಿದ್ದ. ಆ ವ್ಯಕ್ತಿಯೇ ಹಿಮಾಲಯ ಡ್ರಗ್ಸ್ (ಔಷಧಿ) ಕಂಪನಿಯ ಮುಖ್ಯಸ್ಥ ಎಂದೂ ವಿಡಿಯೊದ ಅಡಿ ಬರಹದಲ್ಲಿ ಬರೆಯಲಾಗಿತ್ತು. ಈ ಕುರಿತು ಫ್ಯಾಕ್ಟ್ಇಂಡಿಯಾ.ಇನ್ ಸತ್ಯಶೋಧನೆ ಕೈಗೊಂಡಿತು. ಈ ಟ್ವೀಟ್‌ ಅನ್ನು ಟ್ವಿಟರ್ ಈಗಾಗಲೇ ಅಳಿಸಿಹಾಕಿದೆ. ಆದರೆ, ಅದರ ಸ್ಕ್ರೀನ್‌ಶಾಟ್‌ಗಳು ಇವೆ.

ಫೇಸ್‌ಬುಕ್‌ನಲ್ಲಿ ಕೂಡ ಸಾಕಷ್ಟು ಪೋಸ್ಟ್‌ಗಳು ಇದೇ ವೀಡಿಯೊದೊಂದಿಗೆ ಹರಿದಾಡಿವೆ. ಒಂದು ಸ್ಯಾಂಪಲ್ ಇಲ್ಲಿದೆ:

ಲಿಂಕ್‌ನಲ್ಲಿ ನೀವು ಮತ್ತಷ್ಟು ಪೋಸ್ಟ್‌ಗಳನ್ನು ಗಮನಿಸಬಹುದು:

ಸತ್ಯಶೋಧನೆ

ಈ ಕುರಿತು ಶೋಧನೆ ನಡೆಸಿದಾಗ ಕಳೆದ ವರ್ಷವೂ ಇದೇ ವಿಡಿಯೋ ಹಂಚಿಕೊಳ್ಳಲಾಗಿತ್ತು. ಈ ವಿಡಿಯೊದ ಜೊತೆಗಿರುವ ಕ್ಯಾಪ್ಷನ್‌ನಲ್ಲಿ ಹೀಗೆ ಹೇಳಲಾಗಿದೆ: 

“ಈ ಮುಸ್ಲಿಂ ವ್ಯಕ್ತಿಯು ಹಿಮಾಲಯ ಕಂಪನಿಯ ಮಾಲೀಕ. ಆತ ಏನು ಹೇಳುತ್ತಿದ್ದಾನೆಂಬುದನ್ನು ಗಮನವಿಟ್ಟು ಕೇಳಿ. ನಿಮಗೊಂದು ಎಚ್ಚರಿಕೆಯ ಕರೆಗಂಟೆ. ಈ ಕಂಪನಿಯು ಸೌಂದರ್ಯ ವರ್ಧಕಗಳು ಮತ್ತು ಆಯುರ್ವೇದ ಔಷಧಿ ಮಾರುತ್ತಿದೆ. ಈತನ ಭಾಷಣ ಕೇಳಿದರೆ ನಿಮಗೇ ಅರಿವಾಗುತ್ತದೆ. ಹೀಗಾಗಿ ಈ ಕಂಪನಿಯ ಲಿವ್52 ನಿಂದ ಹಿಡಿದು ಹ್ಯಾಂಡ್ ಸ್ಯಾನಿಟೈಸರ್‌ವರೆಗಿನ ಎಲ್ಲ ಉತ್ಪನ್ನಗಳನ್ನು ಬಳಸಬೇಡಿ. ಖರೀದಿ ನಿಲ್ಲಿಸಿ ಮತ್ತು ಈ ಸಂದೇಶವನ್ನು ಹಂಚಿಕೊಳ್ಳಿ. ಹೀಗೆ ಮಾಡಿದರೆ ಅವರಿಗೆ ಬುದ್ಧಿ ಬರುತ್ತದೆ. ಈ ಮುಸ್ಲಿಂ ವ್ಯಕ್ತಿ ಹಾಗೂ ಝಕೀರ್ ನಾಯ್ಕ್‌ಗೂ ಯಾವುದೇ ವ್ಯತ್ಯಾಸ ಇಲ್ಲ” ಎಂದು ಬರೆಯಲಾಗಿತ್ತು.

ಈ ವಿಡಿಯೊದ ಮೂಲವನ್ನು ಹುಡುಕಾಡಿದಾಗ ಯೂಟ್ಯೂಬ್‌ ತಾಣದಲ್ಲಿ ಸಿಕ್ಕಿತು. ಈ ವಿಡಿಯೊದಲ್ಲಿ ಟೈಮ್ಸ್ ಎಕ್ಸ್‌ಪ್ರೆಸ್ ಎಂಬ ಲೋಗೋ ಇದೆ. ಇದನ್ನು 2020ರ ಜನವರಿ 26ರಂದು ಪೋಸ್ಟ್ ಮಾಡಲಾಗಿತ್ತು.

ಅದರಲ್ಲಿರುವ ಮಾಹಿತಿಯ ಪ್ರಕಾರ, ಈ ರೀತಿ ಜೋರಾಗಿ ಕೂಗಾಡುತ್ತಿರುವ ವ್ಯಕ್ತಿಯು ಹಿಮಾಲಯ ಔಷಧಿ ಕಂಪನಿಯವನಲ್ಲ ಬದಲಾಗಿ, ಅದು ಭಾನು ಪ್ರತಾಪ್ ಸಿಂಗ್ ಎಂಬ ವಕೀಲ. ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಮುಸಲ್ಮಾನರನ್ನು ವೃಥಾ ಹೋರಾಟ ಮಾಡುವಂತೆ ಮಾಡಿದ ಸಂದರ್ಭದಲ್ಲಿ, ದೆಹಲಿಯ ಮುಸ್ತಫಾಬಾದ್‌ನಲ್ಲಿ ನಡೆದಿದ್ದ ಸಿಎಎ-ವಿರೋಧಿ ಹೋರಾಟದ ಸಂದರ್ಭವಿದು. ಈ ವಕೀಲ ರಾಷ್ಟ್ರೀಯ ಜನಹಿತ ಸಂಘರ್ಷ ಪಾರ್ಟಿ ಎಂಬ ಸಂಸ್ಥೆಯನ್ನು ಕಟ್ಟಿ ಅದರ ಅಧ್ಯಕ್ಷನಾಗಿ ಕೆಲಸ ನ ನಿರ್ವಹಿಸುತ್ತಿದ್ದ.

ಈ ವಿಡಿಯೊವನ್ನು ಪರಿಶೀಲಿಸಿದಾಗ, ಈಗ ವೈರಲ್ ಆಗಿರುವ ವಿಡಿಯೊವು ಇದೇ ವಿಡಿಯೊದಿಂದ ಕತ್ತರಿಸಿ ತೆಗೆದ ಭಾಗ. ಅಂದರೆ 4:36 ನಿಮಿಷದ ಬಳಿಕದ ಭಾಗ ಎಂಬುದು ಖಚಿತವಾಯಿತು.

ಇದರಲ್ಲಿ ಆತನ ಮಾತಿನ ಪ್ರಕಾರ, ರಿಲಯನ್ಸ್, ಪತಂಜಲಿಗೆ ನೀಡಿದ ಹಣವು ಆರೆಸ್ಸೆಸ್‌ಗೆ ಶಸ್ತ್ರಾಸ್ತ್ರಗಳನ್ನು ಖರೀದಿಸಲು ಬಳಕೆಯಾಗುತ್ತದೆ. ಇದೊಂದು ಯುದ್ಧದ ಮೈದಾನ. ಅವೆಲ್ಲವನ್ನೂ ಬಹಿಷ್ಕರಿಸಿ ಎಂದು ಕರೆ ನೀಡುತ್ತಾನೆ. ಭಾಷಣಪೂರ್ತಿ ದ್ವೇಷದ ನುಡಿಗಳೇ ತುಂಬಿದ್ದವು.

3:21 ನಿಮಿಷದಲ್ಲಿ ರಿಲಯನ್ಸ್ ಮತ್ತು ಪತಂಜಲಿ ವಿರುದ್ಧ ಬಡಬಡಿಕೆ ಆರಂಭವಾಗುತ್ತದೆ. ಪತಂಜಲಿ ಉತ್ಪನ್ನಗಳು ಕಚಡಾ ಎಂದು ಕರೆಯುವ ಈತ, ಅವರೆಲ್ಲ ನಮ್ಮ ಶತ್ರುಗಳು. ನಾವು ಅವರನ್ನು ಬಹಿಷ್ಕರಿಸೋಣ, ಅವರ ಬೆನ್ನೆಲುಬು ಮುರಿಯೋಣ. ಬೆನ್ನೆಲುಬು ಮುರಿದರೆ ಮತ್ತೆಂದೂ ಅವರು ಎದ್ದು ನಿಲ್ಲಲಾರರು. ಇದು ಯುದ್ಧ, ಯುದ್ಧದ ತಂತ್ರಗಳನ್ನೇ ಅನುಸರಿಸಬೇಕಿದೆ. ಎಲ್ಲರಿಗೂ ಇದನ್ನು ವಿವರಿಸಿ ಹೇಳಿ ಅಂತೆಲ್ಲ ಆತ ಕರೆ ನೀಡಿದ್ದಾನೆ.

ಹೀಗಾಗಿ, ಇದು ಹಿಮಾಲಯ ಡ್ರಗ್ಸ್ ಕಂಪನಿಯ ಮಾಲೀಕನ ವಿಡಿಯೊ ಅಲ್ಲ. ಬದಲಾಗಿ, ಸಿಎಎ-ವಿರೋಧಿ ಹೋರಾಟ ನಡೆಸಿದ ಭಾನುಪ್ರತಾಪ್ ಸಿಂಗ್ ಎಂಬಾತನ ವಿಡಿಯೊ ಎಂಬುದು ಖಚಿತವಾಗಿದೆ.

ಹಿಮಾಲಯ ಕಂಪನಿಯನ್ನು 1930ರಲ್ಲಿ ಆರಂಭಿಸಿದ್ದು ಮುಹಮ್ಮದ್ ಮನಾಲ್ ಎಂಬ ಮುಸ್ಲಿಂ ವ್ಯಕ್ತಿ. ಅವರು 1986ರಲ್ಲಿ ಮೃತಪಟ್ಟಿದ್ದು, ಇದೀಗ ಅವರ ಮೂರನೇ ಪೀಳಿಗೆಯವರು ಇದನ್ನು ನಡೆಸುತ್ತಿದ್ದಾರೆ.

ಹಿಮಾಲಯ ಡ್ರಗ್ಸ್ ಕಂಪನಿ ಕೂಡ ಈ ಕುರಿತು ಸ್ಪಷ್ಟನೆ ನೀಡಿ, ಹಿಮಾಲಯ ವೆಲ್‌ನೆಸ್‌ ಕಂಪನಿ ಹೆಸರಿನಲ್ಲಿ ಹರಿದಾಡುತ್ತಿರುವ ವಿಡಿಯೊ ನಕಲಿ. ಅದರಲ್ಲಿರುವ ವ್ಯಕ್ತಿಗೂ ಹಿಮಾಲಯ ಸಂಸ್ಥೆಗೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದೆ. ಸ್ಪಷ್ಟನೆ ಇಲ್ಲಿದೆ:

ಅಂತಿಮ ನಿರ್ಣಯ

ಭಾರತದ ರಿಲಯನ್ಸ್ ಹಾಗೂ ಪತಂಜಲಿ ಉತ್ಪನ್ನಗಳನ್ನು ಬಹಿಷ್ಕರಿಸಲು ಕರೆ ನೀಡಿದ್ದ ವೈರಲ್ ವಿಡಿಯೊದಲ್ಲಿದ್ದ ವ್ಯಕ್ತಿ ಹಿಮಾಲಯ ಕಂಪನಿಯ ಮಾಲೀಕ ಅಲ್ಲ. ಬದಲಾಗಿ ಅದು ಸಿಎಎ-ವಿರೋಧಿ ಹೋರಾಟದ ಸಂದರ್ಭದಲ್ಲಿ ಭಾನುಪ್ರತಾಪ್ ಸಿಂಗ್ ಎಂಬ ವಕೀಲ (ಹೋರಾಟಗಾರ) ಮಾತನಾಡಿದ ವಿಡಿಯೊ. ಹಿಮಾಲಯ ಕಂಪನಿಯ ಮಾಲೀಕರು ಮುಸ್ಲಿಮರು ಎಂಬುದು ನಿಜವಾದರೂ, ಅವರಿಗೂ ಈ ವಿಡಿಯೊಗೂ ಯಾವುದೇ ಸಂಬಂಧವಿಲ್ಲ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು