ಏನಿದು ಕ್ಲೇಮ್
ಬಸ್ ನಿಲ್ದಾಣವೊಂದರಲ್ಲಿ, ಆಭರಣಭೂಷಿತೆಯಾದ ಮಹಿಳೆಯೊಬ್ಬರಿಗೆ ಏನೋ ತಿನಿಸು ನೀಡಿ ಆಭರಣ ದೋಚುತ್ತಿರುವ ವಿಡಿಯೊ ಒಂದು ಅಂತರಜಾಲದಲ್ಲಿ ವೈರಲ್ ಆಗಿದ್ದು, ಹೊರಗೆ ಹೋಗುವಾಗ ಅಪರಿಚಿತರಿಂದ ಪ್ರಸಾದ ಸೇವಿಸದಿರಿ ಎಂಬ ಅಡಿಬರಹವು ಸದ್ದು ಮಾಡುತ್ತಿತ್ತು. ಬೇರೊಬ್ಬ ಮಹಿಳೆ ನೀಡಿದ ತಿನಸನ್ನು ತಿಂದ ಆಕೆ, ಪ್ರಜ್ಞೆ ತಪ್ಪುತ್ತಾಳೆ ಮತ್ತು ಸಮೀಪವಿದ್ದ ಒಡನಾಡಿಗಳೆಲ್ಲ ಬಂದು ಸೇರಿಕೊಂಡು, ಆ ಮಹಿಳೆ ತೊಟ್ಟಿದ್ದ ಆಭರಣಗಳನ್ನೆಲ್ಲ ಬಿಚ್ಚಿಕೊಂಡು ಪರಾರಿಯಾಗುತ್ತಾರೆ. ಇದು ಸಿಸಿಟಿವಿಯಲ್ಲಿ ದಾಖಲಾಗಿದೆ ಎಂಬ ರೀತಿಯಲ್ಲಿ ವಿಡಿಯೊವನ್ನು ತಯಾರಿಸಲಾಗಿತ್ತು.
ಈ ಕುರಿತು ಫ್ಯಾಕ್ಟ್ಇಂಡಿಯಾ ಸತ್ಯಾಸತ್ಯತೆ ಪರಿಶೀಲನೆ ನಡೆಸಿತು.
ಆಸಕ್ತಿದಾಯಕ ಸುದ್ದಿಗಳ ಸತ್ಯಾಂಶಕ್ಕಾಗಿ ನಮ್ಮನ್ನು ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲಿ ಫಾಲೋ ಮಾಡಿ.
ಮೊದಲನೆಯದಾಗಿ, ಈ ವಿಡಿಯೊವನ್ನು ಗಮನಿಸಿ ನೋಡಿದರೆ ಸಿಸಿಟಿವಿ ಫೂಟೇಜ್ ಅಲ್ಲವೆಂಬುದು ಖಚಿತವಾಗುತ್ತದೆ. ಯಾಕೆಂದರೆ ಸಿಸಿಟಿವಿ ಇಷ್ಟು ಸ್ಪಷ್ಟವಾಗಿ ಯಾವುದನ್ನೂ ತೋರಿಸುವುದಿಲ್ಲ ಮತ್ತು ಮಧ್ಯೆ ಮಧ್ಯೆ ಪಾಪ್-ಅಪ್ ಆಗುವ ವಿಡಿಯೊ ತುಣುಕುಗಳನ್ನು ಗಮನಿಸಿದರೆ, ಇದು ಎಡಿಟ್ ಮಾಡಲಾದ ವಿಡಿಯೊ ಎಂಬುದು ವೇದ್ಯವಾಗುತ್ತದೆ. ಈ ವಿಡಿಯೊ ಶೂಟ್ ಆಗಿರುವ ಸ್ಥಳವು ಸಿಕಂದರಾಬಾದ್ ಎಂದು ಊಹಿಸಲು ಸಾಧ್ಯವಾಗುವಂತೆ ಹಿನ್ನೆಲೆಯಲ್ಲಿರುವ ಬರಹಗಳು ಸ್ಪಷ್ಟವಾಗಿ ಕಾಣಿಸುತ್ತವೆ.
ಈ ವಿಡಿಯೊದ ಒಂದು ಭಾಗದ ಸ್ಕ್ರೀನ್ ಶಾಟ್ ತೆಗೆದು, ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಟೂಲ್ ಮೂಲಕ, ಅಂಥದ್ದೇ ಚಿತ್ರಗಳು ಇವೆಯೇ ಎಂದು ಅಂತರಜಾಲದಲ್ಲಿ ಹುಡುಕಲಾಯಿತು. ಸ್ಕೈನ್ಯೂಸ್ ಅರೇಬಿಯಾ ಹೆಸರಿನ ಉರ್ದು ಆನ್‌ಲೈನ್ ಸುದ್ದಿ ಜಾಲತಾಣವೊಂದರಲ್ಲಿ ಇದನ್ನೇ ಹೋಲುವ ಚಿತ್ರ ಗೋಚರಿಸಿತು. ಅದರ ಲಿಂಕ್ ಇಲ್ಲಿದೆ.
ಅದು ಉರ್ದು ಭಾಷೆಯಲ್ಲಿರುವುದರಿಂದ ಗೂಗಲ್ ಟ್ರಾನ್ಸ್‌ಲೇಟ್ ಟೂಲ್ ಮೂಲಕ ಅದನ್ನು ಇಂಗ್ಲಿಷಿಗೆ ಭಾಷಾಂತರಿಸಿ ನೋಡಿದಾಗ, ಇದೊಂದು ಜಾಗೃತಿ ಮೂಡಿಸುವ ವಿಡಿಯೊ ಎಂಬ ಸುಳಿವು ಲಭ್ಯವಾಯಿತು. ಮತ್ತಷ್ಟು ಹುಡುಕಿ ನೋಡಿದಾಗ, ಇದರ ಮೂಲ ವಿಡಿಯೊ ಕೂಡ ಯೂಟ್ಯೂಬ್ ಜಾಲತಾಣದಲ್ಲಿ ದೊರೆಯಿತು.
Youtube ತಾಣಕ್ಕೆ ಹೋಗಿ "Careful with strangers CCTV" ಎಂದು ಹುಡುಕಿದಾಗ ಮೊದಲ ವಿಡಿಯೊ ಮತ್ತು ಈಗ ವೈರಲ್ ಆಗಿರುವ ವಿಡಿಯೊ ತಾಳೆಯಾಗುತ್ತಿತ್ತು ಮತ್ತು ಅದು ಹೆಚ್ಚು ಸ್ಪಷ್ಟವಾಗಿತ್ತು. ಉತ್ತಮ ಗುಣಮಟ್ಟದ್ದಾಗಿದ್ದ ಕಾರಣ, ಅಕ್ಷರಗಳು ಸರಿಯಾಗಿ ಕಾಣಿಸುತ್ತಿದ್ದವು.
ಇದೀಗ ಶೇರ್ ಆಗಿರುವ ವಿಡಿಯೊ 3RD EYE ಹೆಸರಿನ ಈ ಯೂಟ್ಯೂಬ್ ಚಾನೆಲ್‌ನ ಇದೇ ವಿಡಿಯೊ ಎಂಬುದು ಸ್ಪಷ್ಟವಾಯಿತು. ಇಲ್ಲಿಂದಲೇ ಡೌನ್‌ಲೋಡ್ ಮಾಡಿ, ಕಡಿಮೆ ರೆಸೊಲ್ಯುಶನ್ ಇರುವ ವಿಡಿಯೊವನ್ನು 'ಅಪರಿಚಿತರಿಂದ ಪ್ರಸಾದ ಸೇವಿಸಬೇಡಿ' ಎಂಬ ಅಡಿಬರಹದೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಲಾಗಿತ್ತು.
ಈ ಯೂಟ್ಯೂಬ್ ವಿಡಿಯೊದ ಅಡಿಬರಹ ಗಮನಿಸಿದರೆ, ಅದರಲ್ಲಿ ಸ್ಪಷ್ಟವಾಗಿ ನಮೂದಿಸಲಾಗಿತ್ತು. ಇದೊಂದು ಜನಜಾಗೃತಿ ಮೂಡಿಸುವುದಕ್ಕಾಗಿ ಇರುವ ವಿಡಿಯೊ ಮತ್ತು ಎಲ್ಲವೂ ಪೂರ್ವಸಿದ್ಧತೆಯೊಂದಿಗೆ ಶೂಟಿಂಗ್ ಮಾಡಿ, ಎಡಿಟ್ ಮಾಡಿದ ವಿಡಿಯೊ ಎಂದೂ ಹೇಳಲಾಗಿತ್ತು.
3RD EYE ಯೂಟ್ಯೂಬ್ ಚಾನೆಲ್‌ನಲ್ಲಿ ಮತ್ತಷ್ಟು ವಿಡಿಯೊಗಳನ್ನು ನೋಡಿದಾಗ, ಅದು ಜನಜಾಗೃತಿ ಮೂಡಿಸುವ ಸಾಕಷ್ಟು ವಿಡಿಯೊಗಳನ್ನು ರಚಿಸುತ್ತಿದೆ ಎಂಬುದು ಕೂಡ ತಿಳಿಯಿತು.
ಅಂತಿಮ ನಿರ್ಣಯ
ಅಪರಿಚಿತರಿಂದ ಪ್ರಸಾದ ಸೇವಿಸಬೇಡಿ ಎಂಬ ಅಡಿಬರಹದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾದ ವಿಡಿಯೊ, ನಿಜ ಘಟನೆಯ ಸಿಸಿಟಿವಿ ಫೂಟೇಜ್ ಅಲ್ಲ. ಬದಲಾಗಿ, ಇದು ಜನಜಾಗೃತಿ ಮೂಡಿಸಲೆಂದು ತಯಾರಿಸಲಾದ ವಿಡಿಯೊ.
ರೇಟಿಂಗ್: ದಾರಿ ತಪ್ಪಿಸುವ ಮಾಹಿತಿ
0 ಕಾಮೆಂಟ್‌ಗಳು