Fact India

Fact India
Fact India: ನಕಲಿ ಸುದ್ದಿ ಹಾವಳಿಯ ನಡುವೆ ಕನ್ನಡದ ಪ್ರಥಮ ಫ್ಯಾಕ್ಟ್-ಚೆಕ್ ವೆಬ್ ತಾಣ |

ತಾವೇ ಮಾಡಿದ್ದ ತಪ್ಪುಗಳನ್ನು ಬಿಜೆಪಿ ಮೇಲೆ ಹೊರಿಸಿದ ವಿರೋಧಿಗಳು: ರೋಹಿತ್ ಚಕ್ರತೀರ್ಥರಿಂದ ಸತ್ಯದ ಚಾಟಿಯೇಟು

ಬರಗೂರು ರಾಮಚಂದ್ರಪ್ಪ ನೇತೃತ್ವದಲ್ಲಿ ಕಾಂಗ್ರೆಸ್ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಕಾಲದಲ್ಲಿ ರಚನೆಗೊಂಡಿದ್ದ ಪಠ್ಯದ ತುಣುಕು

ಬೆಂಗಳೂರು: ಕರ್ನಾಟಕದಲ್ಲಿ ತಪ್ಪು ಇತಿಹಾಸವನ್ನು, ತಿರುಚಿದ ಇತಿಹಾಸವನ್ನು ಮತ್ತು ಹಿಂದೂ ವಿರೋಧಿ ಹಾಗೂ ವೈದಿಕ ವಿರೋಧಿ ಲೇಖನಗಳನ್ನೆಲ್ಲ (ಉದಾಹರಣೆಗೆ, ಯಜ್ಞ ಯಾಗಾದಿಗಳಿಂದ ಪರಿಸರ ನಾಶವಾಗಿ ಬರಗಾಲ ಬಂದಿತ್ತು ಎಂಬರ್ಥದ ಲೇಖನಗಳು) ಪಠ್ಯದಲ್ಲಿ ಸೇರಿಸಿ, ಮುಗ್ಧ ಮಕ್ಕಳನ್ನು ಹಿಂದೂ ವಿರೋಧಿಯಾಗಿ, ಕಮ್ಯೂನಿಸ್ಟ್ ವಾದದ ಪರವಾಗಿ ಮತ್ತು ನಕ್ಸಲರಾಗಿ ಬೆಳೆಸುವಲ್ಲಿ ಮಹತ್ತದ ಪಾತ್ರ ವಹಿಸಿದ್ದ ಪಠ್ಯ ಪುಸ್ತಕಗಳನ್ನು ಬದಲಾಯಿಸಲೇಬೇಕಾದ ಅನಿವಾರ್ಯತೆ ಇತ್ತು.

ಹೀಗಾಗಿ ಮುಗ್ಧ ಮಕ್ಕಳಲ್ಲಿ ದೇಶಾಭಿಮಾನ, ದೇಶದ ಸಂಸ್ಕಾರ, ಭಾರತದ ಬಗೆಗೆ ಹೆಮ್ಮೆ, ಭಾರತೀಯ ಸಂಸ್ಕೃತಿಯ ಬಗ್ಗೆ ಗೌರವ - ಇವೆಲ್ಲವನ್ನು ಮೂಡಿಸುವಲ್ಲಿ ನೆರವಾಗುವ ಪಠ್ಯಗಳನ್ನು ಸೇರಿಸುವ ಕೈಂಕರ್ಯಕ್ಕೆ ರೋಹಿತ್ ಚಕ್ರತೀರ್ಥ ಮತ್ತವರ ಪಠ್ಯ ಪರಿಷ್ಕರಣಾ ಸಮಿತಿಯು ನಿರ್ಧರಿಸಿದೆ.

ಆಸಕ್ತಿದಾಯಕ ಸುದ್ದಿಗಳ ಸತ್ಯಾಂಶಕ್ಕಾಗಿ ನಮ್ಮನ್ನು ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲಿ ಫಾಲೋ ಮಾಡಿ.

ಯಾವುದೇ ಕೋಮು ಭಾವನೆ ಕೆರಳಿಸದ, ಮಕ್ಕಳ ಮನಸ್ಸನ್ನು ಭಾರತೀಯತೆಯತ್ತ ತುಡಿಯುವಂತೆ ಮಾಡುವ ಪಠ್ಯಗಳನ್ನು ಸೇರಿಸಿರುವುದು ಭಾರತ ವಿರೋಧಿ ಹಾಗೂ ಹಿಂದೂ ವಿರೋಧಿಗಳ ಕಣ್ಣು ಕೆಂಪಗಾಗಿಸಿದೆ. ಸಹಜವಾಗಿ ಅವರು ರಾಜಕೀಯ ಕಾರಣಕ್ಕಾಗಿ ಇವನ್ನೆಲ್ಲ ವಿರೋಧಿಸುತ್ತಿದ್ದಾರೆ.

ಆದರೆ, ರೋಹಿತ್ ಚಕ್ರತೀರ್ಥರನ್ನು ಅಥವಾ ನರೇಂದ್ರ ಮೋದಿಯನ್ನು, ಆರೆಸ್ಸೆಸ್- ಬಿಜೆಪಿಯನ್ನು ವಿರೋಧಿಸುವ ಭರದಲ್ಲಿ ಇದೇ ಟೀಕಾಕಾರರು ತಾವೇ ಖೆಡ್ಡಾ ತೋಡಿಕೊಂಡು ಬೀಳುತ್ತಿದ್ದಾರೆ ಎಂಬುದನ್ನು ಸ್ವತಃ ರೋಹಿತ್ ಚಕ್ರತೀರ್ಥ ಅವರು ತಮ್ಮ ಫೇಸ್‌ಬುಕ್ ಪೋಸ್ಟ್ ಮೂಲಕ ಪ್ರಚುರಪಡಿಸಿದ್ದಾರೆ.

ಈ ಕೆಳಗಿನ ಅವರ ಪೋಸ್ಟ್ ಓದಿದರೆ, ಪಠ್ಯದಿಂದ ಯಾರನ್ನೂ ಕೈಬಿಟ್ಟಿಲ್ಲ ಎಂಬುದು ವೇದ್ಯವಾಗುತ್ತದೆ. ವಿಶೇಷವೆಂದರೆ, ಕುವೆಂಪು ಅವರನ್ನು ಅವಮಾನಿಸುವಂತೆ ಪರಿಚಯ ಮಾಡಲಾಗಿದೆ ಎಂದು, ತಮ್ಮವರೇ ಬರೆದ ಪರಿಚಯ ಲೇಖನವನ್ನೂ, ರೋಹಿತ್ ಅವರ ತಲೆಗೆ ಕಟ್ಟಿ ಈಗ ಗುಂಡಿಗೆ ಬಿದ್ದಿದ್ದಾರೆ.

ರೋಹಿತ್ ಚಕ್ರತೀರ್ಥ ಅವರ ಮೇಲೆ, ತನ್ಮೂಲಕ ಬಿಜೆಪಿ ಸರಕಾರದ ಮೂಲಕ ಕೆಂಡ ಕಾರುತ್ತಿರುವ ಈ ವಿರೋಧಿ ಪಾಳಯವು, ಹಿಂದೆ ಮಾಡಿದ್ದ ತಪ್ಪುಗಳನ್ನೆಲ್ಲವನ್ನೂ ರೋಹಿತ್ ಅವರು ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾರೆ. ಹೀಗಾಗಿ, ತಾವು ಮಾಡಿದರೆ ತಪ್ಪು, ಅವರು ಮಾಡಿದರೆ ಸರಿ! ಎಂಬ ಎಡಬಿಡಂಗಿತನಕ್ಕೆ ಇಲ್ಲಿದೆ ಸಾಕ್ಷ್ಯ. ನೀವೇ ಓದಿ ನೋಡಿ.

ರೋಹಿತ್ ಚಕ್ರತೀರ್ಥ ತಮ್ಮ ಫೇಸ್‌ಬುಕ್ ಪುಟದಲ್ಲಿ {ಇಲ್ಲಿ} ಬರೆದುಕೊಂಡಿದ್ದಾರೆ:

ದೇವನೂರು ಪರಿಚಯಕ್ಕೆ ಮೀಸಲಿಟ್ಟದ್ದು ಐವತ್ತೇ ಐವತ್ತು ಶಬ್ದಗಳು ಅಂತ ಈ ಬರಗೂರು ಗ್ಯಾಂಗಿನ ಗೋಳಾಟ.

ತಮಾಷೆ ಏನು ಗೊತ್ತಾ, ಆ ಪರಿಚಯವನ್ನು ಬರೆದದ್ದು ಇದೇ ಬರಗೂರು ಗ್ಯಾಂಗು, ನಾವಲ್ಲ!


ಬಾವುಟಕ್ಕೆ ಅವಮಾನ ಮಾಡಿದವರೆಲ್ಲ ಇಲ್ಲಿದ್ದಾರೆ ಅಂತ ಈ ಬರಗೂರು ಗ್ಯಾಂಗಿನ ಗೋಳಾಟ.

ಗಡಿನಾಡ ಕವಿ ಕಯ್ಯಾರ ಕಿಞ್ಞಣ್ಣ ರೈಯವರ "ಏರುತಿಹುದು ಹಾರುತಿಹುದು ನೋಡು ನಮ್ಮ ಬಾವುಟ" ಎಂಬ ಪದ್ಯವನ್ನು ಪಠ್ಯದಿಂದ ಕೈಬಿಟ್ಟದ್ದು ಇದೇ ಬರಗೂರು ಗ್ಯಾಂಗು, ನಾವಲ್ಲ!


ನಾಡದ್ರೋಹಿಗಳು ಸೇರಿ ಪರಿಷ್ಕರಣೆ ಮಾಡುತ್ತಿದ್ದಾರೆ ಅಂತ ಈ ಬರಗೂರು ಗ್ಯಾಂಗಿನ ಗೋಳಾಟ.

"ಚೆಲುವಿನ ನಾಡಿದು ಕನ್ನಡವು" ಪದ್ಯವನ್ನು ಕೈಬಿಟ್ಟದ್ದು ಇದೇ ಬರಗೂರು ಗ್ಯಾಂಗು, ನಾವಲ್ಲ!


ನೆಲದ ವಾಸನೆಯಿರುವ ಪಠ್ಯಗಳನ್ನು ಹೇಳುತ್ತಿಲ್ಲ, ಪುರೋಹಿತಶಾಹಿಯ ವಾಸನೆ ಹೊಡೆಯುತ್ತಿದೆ ಅಂತ ಈ ಬರಗೂರು ಗ್ಯಾಂಗಿನ ಗೋಳಾಟ.

ಬಿ. ಆರ್.‌ ಪೊಲೀಸ ಪಾಟೀಲರು ಬರೆದ "ನೇಗಿಲ ಯೋಗಿ" ಪದ್ಯವನ್ನು ಕಿತ್ತೆಸೆದದ್ದು ಇದೇ ಬರಗೂರು ಗ್ಯಾಂಗು, ನಾವಲ್ಲ!


ರಾಷ್ಟ್ರಕವಿ ಕುವೆಂಪು ಅವರಿಗೆ ಅವಮಾನ ಮಾಡಿದರು ಅಂತ ಈ ಬರಗೂರು ಗ್ಯಾಂಗಿನ ಗೋಳಾಟ.

ಕುವೆಂಪು ಅವರ ಎರಡು ಅತ್ಯುತ್ತಮ ಬರಹಗಳನ್ನು ಪಠ್ಯಗಳಿಂದ ಕೈಬಿಟ್ಟದ್ದು ಇದೇ ಬರಗೂರು ಗ್ಯಾಂಗು, ನಾವಲ್ಲ!


ಬಸವಣ್ಣನವರನ್ನು ಕೈಬಿಟ್ಟಿದ್ದಾರೆಂಬುದು ಸಂಪೂರ್ಣ ಸುಳ್ಳು ಸುದ್ದಿಯಾದರೂ ಅದೇ ನಿಜ ಅಂತ ಈ ಬರಗೂರು ಗ್ಯಾಂಗಿನ ಗೋಳಾಟ.

ಬಸವಣ್ಣ, ಜೇಡರ ದಾಸಿಮಯ್ಯ - ಇಬ್ಬರೂ ಪ್ರಮುಖ ವಚನಕಾರರನ್ನು ಹತ್ತನೇ ತರಗತಿಯಿಂದ ಕೈಬಿಟ್ಟದ್ದು ಇದೇ ಬರಗೂರು ಗ್ಯಾಂಗು, ನಾವಲ್ಲ!


ಒಂದೇ ಸಮುದಾಯದ ಲೇಖಕರಿಗಷ್ಟೇ ಮಣೆ ಹಾಕಿದ್ದೀರಿ ಅಂತ ಈ ಬರಗೂರು ಗ್ಯಾಂಗಿನ ಗೋಳಾಟ.

ಸರ್ಪಭೂಷಣ ಶಿವಯೋಗಿ, ಏಣಗಿ ಬಾಳಪ್ಪ, ಸಿದ್ಧಯ್ಯ ಪುರಾಣಿಕ ಮುಂತಾದ ನಿರ್ದಿಷ್ಟ ಸಮುದಾಯದ ಸಾಹಿತಿಗಳನ್ನು ಕೈಬಿಟ್ಟದ್ದು ಇದೇ ಬರಗೂರು ಗ್ಯಾಂಗು, ನಾವಲ್ಲ!


ಹೆಡ್ಗೇವಾರ್‌ ಪಾಠ ಸೇರಿಸಿದರೆ ಕೇಸರೀಕರಣ; ರಾಜಕೀಯ ನಾಯಕನ ಪಾಠ ನಮಗೇಕೆ ಅಂತ ಈ ಬರಗೂರು ಗ್ಯಾಂಗಿನ ಗೋಳಾಟ.

ನೆಹರೂ ಕುರಿತ ಎರಡೆರಡು ಪಾಠಗಳನ್ನು ಪಠ್ಯದಲ್ಲಿ ತಂದದ್ದು ಇದೇ ಬರಗೂರು ಗ್ಯಾಂಗು, ನಾವಲ್ಲ!


ಸಾರಾ ಅಬೂಬಕರ್‌ ಪಾಠವನ್ನು ಕೈಬಿಟ್ಟಿದ್ದೀರಿ ಅಂತ ಈ ಬರಗೂರು ಗ್ಯಾಂಗಿನ ಗೋಳಾಟ.

ಅದೇ ಸಾರಾ ಅಬೂಬಕರ್‌ ಅವರ ಪಾಠವನ್ನು - ಪಾಠದ ಆಶಯ ಸರಿ ಇಲ್ಲ ಎಂಬ ಕಾರಣ ಕೊಟ್ಟು ಕೈಬಿಟ್ಟದ್ದು ಇದೇ ಬರಗೂರು ಗ್ಯಾಂಗು, ನಾವಲ್ಲ!


ಪಠ್ಯಪುಸ್ತಕಗಳ ಬ್ರಾಹ್ಮಣೀಕರಣವಾಗಿದೆ ಅಂತ ಈ ಬರಗೂರು ಗ್ಯಾಂಗಿನ ಗೋಳಾಟ.

ಒಂದೇ ಪಠ್ಯಪುಸ್ತಕದಲ್ಲಿ 16 ಮಂದಿ ಬ್ರಾಹ್ಮಣರನ್ನು ಸೇರಿಸಿದ್ದು ಇದೇ ಬರಗೂರು ಗ್ಯಾಂಗು, ನಾವಲ್ಲ!


ಲಂಕೇಶರನ್ನು ಬಿಟ್ಟಿರಿ, ಮೂರ್ತಿರಾಯರನ್ನು ಬಿಟ್ಟಿರಿ ಅಂತ ಈ ಬರಗೂರು ಗ್ಯಾಂಗಿನ ಗೋಳಾಟ.

ಹತ್ತನೇ ತರಗತಿಯ ಕನ್ನಡ ಪಠ್ಯಪುಸ್ತಕದಿಂದ ಡಾ. ಬಾಬಾ ಸಾಹೇಬ್‌ ಅಂಬೇಡ್ಕರರನ್ನೂ ಮಹಾತ್ಮಾ ಗಾಂಧಿಯನ್ನೂ ಸೈಲೆಂಟಾಗಿ ಕೈಬಿಟ್ಟಿದ್ದು ಇದೇ ಬರಗೂರು ಗ್ಯಾಂಗು, ನಾವಲ್ಲ!

-ರೋಹಿತ್ ಚಕ್ರತೀರ್ಥ


ಕುವೆಂಪು ಶ್ರೇಷ್ಠ ಸಾಹಿತ್ಯ ಸೇರಿಸಲಾಗಿದೆ

ಅಲ್ಲದೆ, ಮತ್ತೊಂದು ಪೋಸ್ಟ್‌ನಲ್ಲಿ ರೋಹಿತ್ ಅವರು ಬೀಸಿದ ಚಾಟಿಯೇಟು ಇಲ್ಲಿದೆ:

ರಾಷ್ಟ್ರಕವಿ ಕುವೆಂಪು ಬರೆದ "ಅನಲೆ" ಎಂಬ ನಾಟಕವನ್ನು,

"ಅಜ್ಜಯ್ಯನ ಅಭ್ಯಂಜನ" ಎಂಬ ಸುಂದರ ಲಲಿತ ಪ್ರಬಂಧವನ್ನು

ಕೈಬಿಟ್ಟಿತ್ತು - ಬರಗೂರು ಪರಿಷ್ಕರಣ ಸಮಿತಿ.

ಅದೇ ರಾಷ್ಟ್ರಕವಿ ಕುವೆಂಪು ಬರೆದ "ಬಹುಮಾನ" ಎಂಬ ಅರ್ಥಪೂರ್ಣವಾದೊಂದು ಕವಿತೆಯನ್ನು,

"ಬೊಮ್ಮನಹಳ್ಳಿಯ ಕಿಂದರಿಜೋಗಿ"ಯೆಂಬ ಸಾರ್ವಕಾಲಿಕ ಶ್ರೇಷ್ಠ ಶಿಶುಸಾಹಿತ್ಯವನ್ನು ಸೇರಿಸಿದೆ - ಈಗಿನ ಪರಿಷ್ಕರಣ ಸಮಿತಿ.

ನಿಮ್ಮ ಆಯ್ಕೆ ಯಾವುದು ಹೇಳಿ!

ಅಂತ ರೋಹಿತ್ ಪ್ರಶ್ನಿಸಿದ್ದಾರೆ.


ಬರಗೂರು ತಂಡವೇ ಮಾಡಿದ್ದು, ಈಗ 'ಅವಮಾನ'  ಅಂತೆ!

ಮಗದೊಂದು ಪೋಸ್ಟ್‌ನಲ್ಲಿ, ನಾವು ಮಾಡಿದ್ರೆ ಅವಮಾನ, ಅವರು ಮಾಡಿದರೆ ಸನ್ಮಾನವೇ ಎಂದು ಪರೋಕ್ಷವಾಗಿ ಪ್ರಶ್ನಿಸಿದ್ದಾರೆ ರೋಹಿತ್. ಆ ಪೋಸ್ಟ್ ಹೀಗಿದೆ:

ಇಂದು ಬೆಳಗ್ಗೆ ಒಂದು ಧಾರ್ಮಿಕ ಕಾರ್ಯಕ್ರಮದಲ್ಲಿದ್ದೆ. ಫೋನು ರಿಂಗಣಿಸಿತು. ಎತ್ತಿದರೆ ಒಂದು ಟಿವಿ ಚಾನೆಲಿನಿಂದ ಕರೆ. ಏನು ವಿಷಯ, ಕೇಳಿದೆ. ಕುವೆಂಪು ಅವರಿಗೆ ಅವಮಾನವಾಗಿದೆ ಎಂದರು. ಎಲ್ಲಿ ಎಂದರೆ ಪಠ್ಯಪುಸ್ತಕದಲ್ಲಿ ಎಂಬ ಉತ್ತರ ಬಂತು. ಏನು ಅವಮಾನವಾಗಿದೆ ಎಂದು ಕೇಳಿದರೆ "ಕುವೆಂಪು ಅವರು ಇತರರ ಪ್ರೋತ್ಸಾಹದಿಂದ ದೊಡ್ಡ ಕವಿಯಾಗಿ ಬೆಳೆದರು ಎಂದು ಹಾಕಿದ್ದೀರಿ, ಒಬ್ಬ ಮಹಾಕವಿಯ ವಿಚಾರದಲ್ಲಿ ಹೀಗೆ ಬರೆಯಬಹುದೆ?" ಎಂದು ಕೇಳಿದರು ಆಂಕರ್‌. ಒಂದು ಕ್ಷಣ ಇವರು ಏನು ಹೇಳುತ್ತಿದ್ದಾರೆಂದು ಗೊತ್ತಾಗಲಿಲ್ಲ. ಇತರರ ಪ್ರೋತ್ಸಾಹದಿಂದ ಕವಿಯಾಗಿ ಬೆಳೆದರು ಎಂಬುದರಲ್ಲಿ ಅವಮಾನ ಆಗುವಂಥಾದ್ದು ಏನಿದೆ? ಆಂಕರಿಗಾಗಲೀ ಪಕ್ಕದಲ್ಲಿ ಕೂತಿದ್ದ ಮತ್ತೊಬ್ಬ ವಾದಿಗಾಗಲೀ ನಾನು ಅದೆಷ್ಟು ವಿವರಿಸಿ ಹೇಳಿದರೂ ಕೇಳಿದರೂ ಮಾತಿನ ತಿರುಳು ಅರ್ಥವಾಗಲಿಲ್ಲ. "ಅವಮಾನ ಆಗಿದೆಯಲ್ವ ಸಾರ್..‌" - ಒಂದೇ ರಾಗ, ಒಂದೇ ಮಂತ್ರ!.

ಕುವೆಂಪು ಅವರು ತನ್ನ ಶ್ರೀರಾಮಾಯಣದರ್ಶನಮ್ ಮಹಾಕಾವ್ಯವನ್ನು ಅರ್ಪಿಸಿದ್ದು ಗುರುಗಳಾದ ವೆಂಕಣ್ಣಯ್ಯನವರಿಗೆ. ಕುವೆಂಪು ಅವರಿಗೇನೂ ಹೀಗೆ ತನಗೆ ಮಾರ್ಗದರ್ಶನ ಮಾಡಿದವರನ್ನು ಮರೆಯಬೇಕು ಅನ್ನಿಸಲಿಲ್ಲ. ತನ್ನ ಬದುಕಿನಲ್ಲಿ ಸ್ಫೂರ್ತಿದೇವತೆಗಳಾಗಿ ಬಂದ ಎಲ್ಲರನ್ನೂ ಅವರು "ನೆನಪಿನ ದೋಣಿಯಲ್ಲಿ" ನೆನಪಿಸಿಕೊಂಡಿದ್ದಾರೆ. ಆದರೆ ಅವರಿಗೆ ಇತರರು ಪ್ರೋತ್ಸಾಹಿಸಿದರು ಎಂಬ ಅಂಶ ನಮ್ಮ ಮಾಧ್ಯಮಗಳಿಗೆ ಮಾತ್ರ ಅವಮಾನವಾಗಿ ಕಂಡಿದೆ! ವಿಪರ್ಯಾಸ!

ತಮಾಷೆ ಏನು ಗೊತ್ತಾ? ಈ ಪಠ್ಯ ಇರುವುದು 4ನೇ ತರಗತಿಯ ಪರಿಸರ ಅಧ್ಯಯನ ಪಠ್ಯಪುಸ್ತಕದಲ್ಲಿ. ಕೆಲವು ಪ್ರಸಿದ್ಧ ವ್ಯಕ್ತಿಗಳು ಎಂಬ ವಿಷಯವನ್ನು ತಿಳಿಸುವಾಗ ಪುಟದಲ್ಲಿ ಮೂರ್ನಾಲ್ಕು ವ್ಯಕ್ತಿಗಳ ಪರಿಚಯ ಮಾಡುವಾಗ ಕುವೆಂಪು ಅವರ ಪರಿಚಯವೂ ಬಂದಿದೆ. ಇದು ಯಾವುದೇ ಬರಹದ ನಂತರ ಬಂದಿರುವ "ಕವಿಕಾವ್ಯ ಪರಿಚಯ" ಅಲ್ಲ. ಮತ್ತು ಇದನ್ನು ನಮ್ಮ ಪರಿಷ್ಕರಣ ಸಮಿತಿ ಬರೆದದ್ದೂ ಅಲ್ಲ. ಇನ್‌ಫ್ಯಾಕ್ಟ್‌, ನಾವು ಪರಿಸರ ಅಧ್ಯಯನ ಪುಸ್ತಕಗಳನ್ನು ಪರಿಷ್ಕರಣ ಮಾಡಿಯೂ ಇಲ್ಲ. ಇದು ಹಿಂದೆ ಬರಗೂರು ಗ್ಯಾಂಗ್‌ ಹೇಗೆ ಪರಿಷ್ಕರಣೆ ಮಾಡಿತ್ತೋ ಹಾಗೆಯೇ ಮುಂದುವರಿದಿದೆ. ಆದರೆ ಅದೇ ಬರಗೂರು ಗ್ಯಾಂಗ್‌ ಈಗ ಈ ಸಾಲುಗಳಲ್ಲಿ ಕುವೆಂಪು ಅವರಿಗೆ ಅವಮಾನವಾಗಿದೆ ಎಂದು ಗೋಳಾಡುತ್ತಿದೆ. ಶಬ್ದಗಳ ಶಕ್ತಿ ನೋಡಿ - ಅವೇ ಶಬ್ದಗಳು, ಅವೇ ವಾಕ್ಯಗಳು, ಅವೇ ಸಾಲುಗಳು - ಬರಗೂರು ಕಾಲದಲ್ಲಿ ಆ ಸಾಲುಗಳಲ್ಲಿ ಕುವೆಂಪು ಅವರಿಗೆ ಅವಮಾನ ಆಗಿರಲಿಲ್ಲ, ಈಗ ಆಗಿದೆ! ಹೇಗಿದೆ!

-ರೋಹಿತ್ ಚಕ್ರತೀರ್ಥ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು