Fact India

Fact India
Fact India: ನಕಲಿ ಸುದ್ದಿ ಹಾವಳಿಯ ನಡುವೆ ಕನ್ನಡದ ಪ್ರಥಮ ಫ್ಯಾಕ್ಟ್-ಚೆಕ್ ವೆಬ್ ತಾಣ |

Fact: ಸೇನಾ ಮುಖ್ಯಸ್ಥ ಮನೋಜ್ ಪಾಂಡೆ, ನಿತಿನ್ ಗಡ್ಕರಿ ಜೊತೆ ಆರೆಸ್ಸೆಸ್ ಮುಖ್ಯಸ್ಥರನ್ನು ಭೇಟಿಯಾದರೇ?

ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಮತ್ತು ಬಿಜೆಪಿ ಮುಖಂಡ, ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಜೊತೆಗೆ ಇರುವ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನರಲ್ ಪಾಂಡೆ ಅವರು ನಾಗ್ಪುರದ ಆರೆಸ್ಸೆಸ್ ಕಚೇರಿಗೆ ಭೇಟಿ ನೀಡಿದ್ದಾರೆ ಮತ್ತು ಇದು ಸೇನಾಪಡೆಗಳ ಧ್ರುವೀಕರಣ, ಇದರಿಂದ ಅಪಾಯ ಕಟ್ಟಿಟ್ಟ ಬುತ್ತಿ ಎಂಬರ್ಥದಲ್ಲಿ ಕೆಲವರು ಬರೆದುಕೊಂಡಿದ್ದಾರೆ.

ಆಸಕ್ತಿದಾಯಕ ಸುದ್ದಿಗಳ ಸತ್ಯಾಂಶಕ್ಕಾಗಿ ನಮ್ಮನ್ನು ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲಿ ಫಾಲೋ ಮಾಡಿ.


ಉದಾಹರಣೆಗೆ ಈ ಪೋಸ್ಟ್ ನೋಡಿ.

ಮತ್ತೊಂದು ಪೋಸ್ಟ್ ಇಲ್ಲಿದೆ.

ಇದೇ ರೀತಿ ಫೇಸ್‌ಬುಕ್, ಟ್ವಿಟರ್ ತಾಣಗಳಲ್ಲಿ ಸಾಕಷ್ಟು ಪೋಸ್ಟ್‌ಗಳು ಕಂಡುಬಂದಿವೆ. ಇವು ಸುಳ್ಳು ಎಂದು ತಿಳಿಯದ ಜನರು ಇದನ್ನು ಶೇರ್ ಮಾಡುತ್ತಲೇ ಇದ್ದಾರೆ.

ಇದರಲ್ಲಿ ಸುಳ್ಳೇನಿದೆ? ಈ ಕುರಿತು ಫ್ಯಾಕ್ಟ್ಇಂಡಿಯಾ ಡಾಟ್ ಇನ್ ತಾಣವು ಫ್ಯಾಕ್ಟ್ ಚೆಕ್ ನಡೆಸಿದೆ.

ಇದು ತಿದ್ದಿ ಹಂಚಿಕೊಂಡ ಚಿತ್ರ ಎಂಬುದು ತನಿಖೆಯ ವೇಳೆ ಶ್ರುತಪಟ್ಟಿದೆ. ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ, ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಪ್ರತ್ಯೇಕ ಚಿತ್ರಗಳನ್ನು ಕತ್ತರಿಸಿ, ಒಂದೇ ಫೋಟೋದಲ್ಲಿ ಜೋಡಿಸಿ ಫೋಟೋಶಾಪ್ ಅಥವಾ ಅದೇ ರೀತಿಯ ಬೇರೆ ಟೂಲ್‌ಗಳ ಮೂಲಕ ಈ ನಕಲಿ ಫೋಟೋ ರಚಿಸಲಾಗಿದೆ ಎಂಬುದು ತಿಳಿದುಬಂದಿದೆ.

ಫ್ಯಾಕ್ಟ್ ಚೆಕ್ ಮಾಡಿದ್ದು ಹೇಗೆ?
ಈ ಚಿತ್ರವನ್ನು ಕೂಲಂಕಷವಾಗಿ ನೋಡಿದಾಗಲೇ, ಇದು ಮೂರು ಚಿತ್ರಗಳನ್ನು ಜೋಡಿಸಿದ ಚಿತ್ರ ಎಂಬುದು ತಿಳಿಯುತ್ತದೆ. ಮೂವರ ಚಿತ್ರಗಳ ಹಿನ್ನೆಲೆ (background) ಪ್ರತ್ಯೇಕವಾಗಿದೆ, ಮೂವರ ಅಂಗಿಗಳು ಪರಸ್ಪರರನ್ನು ಸಂಪರ್ಕಿಸುವ ಜಾಗದಲ್ಲಿ ಬ್ಲರ್ ಮಾಡಲಾಗಿದೆ ಎಂಬುದು ಮೇಲ್ನೋಟಕ್ಕೆ ಕಾಣಿಸುತ್ತದೆ. ಆದರೂ, ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಟೂಲ್ ಬಳಸಿ ಈ ಚಿತ್ರದ ಪೂರ್ವಾಪರ ತಿಳಿಯಲು ಪ್ರಯತ್ನಿಸಿದೆವು.

ಇಂಥವೇ ಸಾಕಷ್ಟು ಚಿತ್ರಗಳು ಕಂಡುಬಂದವು. ಬಳಿಕ, ಗೂಗಲ್ ಲೆನ್ಸ್ ಬಳಸಿ, ಚಿತ್ರಗಳನ್ನು ಪ್ರತ್ಯೇಕ ಪ್ರತ್ಯೇಕವಾಗಿ ಸರ್ಚ್ ಮಾಡಿದೆವು.

ಮೋಹನ್ ಭಾಗವತ್ ಚಿತ್ರವನ್ನು ಮಾತ್ರವೇ ಹುಡುಕಿದಾಗ, ಅವರನ್ನು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಭೇಟಿ ಮಾಡಿದ ಚಿತ್ರದ ಬಗ್ಗೆ ಇಲ್ಲಿ ಮಾಹಿತಿ ಸಿಕ್ಕಿತು. ಇದು 2017ರ ಚಿತ್ರ.

ಅದು ಅಂದಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ತೆರವು ಮಾಡುವ ಸ್ಥಾನಕ್ಕೆ ಭಾಗವತ್ ಹೆಸರಿಗೆ ಬೆಂಬಲ ಸೂಚಿಸುವ ಸಂದರ್ಭದ ಚಿತ್ರವಾಗಿತ್ತು.

ಮುಂದೆ, ನಿತಿನ್ ಗಡ್ಕರಿ ಅವರ ಚಿತ್ರವನ್ನು ಗೂಗಲ್ ಲೆನ್ಸ್ ಮೂಲಕ ಹುಡುಕಿದಾಗ, ಮುಂಬಯಿಯಲ್ಲಿ ಅವರು 2022ರ ಏಪ್ರಿಲ್ ತಿಂಗಳಾರಂಭದಲ್ಲಿ ಮಹಾರಾಷ್ಟ್ರ ನವನಿರ್ಮಾಣ ಸೇನಾ ಮುಖ್ಯಸ್ಥ ರಾಜ್ ಠಾಕ್ರೆ ಅವರನ್ನು ಭೇಟಿಯಾದಾಗ ತೆಗೆದ ಚಿತ್ರವೆಂಬುದು ಖಚಿತವಾಯಿತು. ಈ ಕುರಿತು ಇಂಡಿಯಾ ಟುಡೇ ಮತ್ತಿತರ ಜಾಲತಾಣಗಳು ವರದಿ ಮಾಡಿದ್ದವು. ಅದರ ಲಿಂಕ್ ಇಲ್ಲಿದೆ.

ನಂತರ, ಜ.ಮನೋಜ್ ಪಾಂಡೆ ಚಿತ್ರವನ್ನು ಪ್ರತ್ಯೇಕವಾಗಿ ಗೂಗಲ್ ಲೆನ್ಸ್ ಮೂಲಕ ಹುಡುಕಿದಾಗ, ಈ ಲಿಂಕ್ ಗೋಚರಿಸಿತು.

ಇದು ಈಟಿವಿ ಭಾರತ್ ತಾಣದ ಮರಾಠಿ ಪೋರ್ಟಲ್‌ನಲ್ಲಿ ಬಂದ ವಿಶೇಷ ವರದಿಯ ಚಿತ್ರ. ಮನೋಜ್ ಪಾಂಡೆ ಅವರು ನಾಗ್ಪುರದ ತಮ್ಮ ಸ್ನೇಹಿತನ ಮನೆಗೆ ಭೇಟಿ ಕೊಟ್ಟಾಗ ತೆಗೆದ ಚಿತ್ರವಿದು.

ಇದರೊಂದಿಗೆ, ಈ ಮೂರು ಚಿತ್ರಗಳನ್ನು ಕತ್ತರಿಸಿ, ಜೋಡಿಸಿ ನಕಲಿ ಚಿತ್ರವನ್ನು ನಕಲಿ ಸುದ್ದಿಯೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವುದು ಖಚಿತವಾಯಿತು.

ಇದಲ್ಲದೆ, ಜನರಲ್ ಮನೋಜ್ ಪಾಂಡೆ ಅವರು ಆರೆಸ್ಸೆಸ್ ಮುಖ್ಯಸ್ಥರನ್ನು ಭೇಟಿಯಾಗಿರುವ ಕುರಿತಾಗಿ ಯಾವುದೇ ವಿಶ್ವಾಸಾರ್ಹ ಸುದ್ದಿ ತಾಣಗಳಲ್ಲಿಯೂ ವರದಿ ಇಲ್ಲ. ಅದು ದೊಡ್ಡ ಸುದ್ದಿಯೇ ಆಗಿರುವುದರಿಂದ, ಮಾಧ್ಯಮಗಳು ಖಂಡಿತವಾಗಿಯೂ ಪ್ರಕಟಿಸುತ್ತಿದ್ದವು. ಆದರೆ, ಅಂಥ ಸುದ್ದಿಯೂ ಎಲ್ಲೂ ಪ್ರಕಟವಾಗಿಲ್ಲ.

ಅಂತಿಮ ನಿರ್ಣಯ
ಈ ಎಲ್ಲ ಕಾರಣಕ್ಕೆ, ಆರೆಸ್ಸೆಸ್ ಮುಖ್ಯಸ್ಥರನ್ನು ಸೇನಾ ಮುಖ್ಯಸ್ಥರು ನಿತಿನ್ ಗಡ್ಕರಿ ಜೊತೆ ಭೇಟಿಯಾದರೆಂಬ ಸುದ್ದಿ ನಕಲಿ ಮತ್ತು ಚಿತ್ರವೂ ತಿರುಚಿದ ಚಿತ್ರ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು