ಜ್ಞಾನವಾಪಿ ಮಸೀದಿಯ ಪಕ್ಕದ ಮಂದಿರದ ಚಿತ್ರ. ಡ್ರೋನ್ ಮೂಲಕ ಕಂಡುಬಂದಾಗ. ಟ್ವಿಟರ್ ಚಿತ್ರ: @_ugra_ |
ಲಖ್ನೋ: ಉತ್ತರ ಪ್ರದೇಶದ ವಾರಾಣಸಿಯಲ್ಲಿರುವ ಕಾಶಿ ವಿಶ್ವನಾಥ ಕ್ಷೇತ್ರದ ಸಮೀಪವೇ ಇರುವ ಜ್ಞಾನವಾಪಿ (Gyan Vapi) 'ಮಸೀದಿ'ಯು ಹಿಂದೂ ದೇವಸ್ಥಾನವನ್ನು ಕೆಡವಿ ಕಟ್ಟಲಾದ ಕಟ್ಟಡ ಎಂಬ ವಿವಾದದ ನಡುವೆಯೇ ಅದರ ಸಮೀಕ್ಷಾ ಕಾರ್ಯ ನಡೆಯುತ್ತಿದೆ. ಈ ಹಂತದಲ್ಲಿ, ನ್ಯಾಯಾಲಯದ ಆದೇಶಾನುಸಾರ ನಡೆಯುತ್ತಿರುವ ಸಮೀಕ್ಷೆಯ ಸಂದರ್ಭದಲ್ಲಿ ಆ ತಥಾಕಥಿತ ಮಸೀದಿಯೊಳಗೆ ಹಿಂದೂ ದೇವರುಗಳ ಸಾಕಷ್ಟು ಮೂರ್ತಿಗಳು, ಭಗ್ನ ಮೂರ್ತಿಗಳು ಗೋಚರಿಸಿವೆ.
ಕಳೆದ ವಾರ ನಡೆದ ಸಮೀಕ್ಷೆಯ ಸಂದರ್ಭದಲ್ಲಿ, ಆ ಜಾಗವು ಹಿಂದೂ ದೇವಸ್ಥಾನದ ಕುರುಹುಗಳನ್ನೇ ಹೊಂದಿದೆ ಎಂದು ಹಿಂದೂ ಅರ್ಜಿದಾರರ ಪರವಾಗಿ ವಾದಿಸುತ್ತಿದ್ದ ಮತ್ತು ಸಮೀಕ್ಷೆಯಲ್ಲಿ ಭಾಗಿಯಾಗಿರುವ ವಕೀಲ ಅಜಯ್ ಮಿಶ್ರಾ ಅವರು ಹೇಳಿದ್ದರು.
ಆಸಕ್ತಿದಾಯಕ ಸುದ್ದಿಗಳ ಸತ್ಯಾಂಶಕ್ಕಾಗಿ ನಮ್ಮನ್ನು ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲಿ ಫಾಲೋ ಮಾಡಿ.
ಗುರುವಾರ (ಮೇ 19) ಅವರು ನೀಡಿದ ಮಾಹಿತಿಯ ಅನುಸಾರ, ಆ ಮಸೀದಿಯೊಳಗೆ ಶೇಷನಾಗನ ಹೆಡೆ ಕೂಡ ಅಲ್ಲಿತ್ತು ಎಂದಿದ್ದಾರೆ. "ನನಗೆ ನೆಲಮಹಡಿಗೆ ಹೋಗಲು ಅವಕಾಶ ನೀಡಲಾಗಿಲ್ಲ. ಅಲ್ಲಿರುವ ಅವಶೇಷಗಳಿಗೆ ಏನಿಲ್ಲವೆಂದರೂ 500-600 ವರ್ಷಗಳಷ್ಟು ಇತಿಹಾಸವಿದೆ" ಎಂದು ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ಅಜಯ್ ಮಿಶ್ರಾ ಹೇಳಿದ್ದಾರೆ.
ಅಜಯ್ ಮಿಶ್ರಾ ಅವರು ಮೂರು ದಿನಗಳ ಕಾಲ ನಡೆದ ವೀಡಿಯೊ ಸಮೀಕ್ಷೆ ಮಾಡಿದ ತಂಡದಲ್ಲಿದ್ದರು. ಈ ಮಸೀದಿ ಆವರಣದಲ್ಲಿ ಶಿವಲಿಂಗಾಕಾರದ ಆಕೃತಿಯಿದೆ ಎಂಬುದನ್ನು ಖಚಿತಪಡಿಸಿದ ಅವರು, ಆದರೆ ಅದನ್ನು ತನ್ನ ವರದಿಯಲ್ಲಿ ಸೇರಿಸಿಲ್ಲ ಎಂದಿದ್ದಾರೆ. ಇದನ್ನು ಹಿಂದುಗಳು ಶಿವಲಿಂಗ ಎಂದು ಕರೆಯುತ್ತಿದ್ದರೆ, ಮಸೀದಿ ಸಮಿತಿಯು ಇದೊಂದು ಕಾರಂಜಿಯ ಮೂಲದ ಆಕೃತಿ ಎಂದು ಹೇಳುತ್ತಿದೆ.
ನ್ಯಾಯಾಲಯದ ವಿಶೇಷ ಆಯುಕ್ತರಾದ ವಿಶಾಲ್ ಸಿಂಗ್ ಕೂಡ ನ್ಯಾಯಾಲಯಕ್ಕೆ ಸಲ್ಲಿಸಿರುವ ವರದಿಯಲ್ಲಿ, ಈ ಆಕೃತಿ ಇರುವುದನ್ನು ಉಲ್ಲೇಖಿಸಿದ್ದಾರೆ. ಅಲ್ಲದೆ, ಸನಾತನ ಸಂಸ್ಕೃತಿಯನ್ನು ಸಂಕೇತಿಸುವ ಹಲವಾರು ಅವಶೇಷಗಳು ಅಲ್ಲಿದ್ದವು. ಉದಾಹರಣೆಗೆ, ಕಮಲ, ಡಮರು, ತ್ರಿಶೂಲ ಮುಂತಾದವುಗಳು ನೆಲ ಮಹಡಿಯ ಗೋಡೆಗಳಲ್ಲಿದ್ದವು ಎಂದಿದ್ದಾರವರು.
ಅಜಯ್ ಮಿಶ್ರಾ ಅವರು ನ್ಯಾಯಾಲಯವೇ ನಿಯೋಜಿಸಿದ್ದ ತಂಡದಲ್ಲಿದ್ದರು. ಆದರೆ, ಖಾಸಗಿ ಛಾಯಾಗ್ರಾಹಕರನ್ನು ಕರೆದೊಯ್ದಿದ್ದಾರೆಂಬ ಆಪಾದನೆ ಅವರ ಮೇಲಿದೆ. ಮಾಧ್ಯಮಗಳಿಗೆ ಸಮೀಕ್ಷೆಯ ವರದಿಯನ್ನು (ವಿಶೇಷವಾಗಿ ಶಿವಲಿಂಗ ಇದೆ ಎಂಬ ಮಾಹಿತಿ) ಸೋರಿಕೆ ಮಾಡಿದ್ದಕ್ಕಾಗಿ ವಾರಾಣಸಿ ನ್ಯಾಯಾಲಯವು ಅಜಯ್ ಮಿಶ್ರಾ ಅವರನ್ನು ತಂಡದಿಂದ ಉಚ್ಚಾಟಿಸಿತ್ತು.
0 ಕಾಮೆಂಟ್‌ಗಳು