Fact India

Fact India
Fact India: ನಕಲಿ ಸುದ್ದಿ ಹಾವಳಿಯ ನಡುವೆ ಕನ್ನಡದ ಪ್ರಥಮ ಫ್ಯಾಕ್ಟ್-ಚೆಕ್ ವೆಬ್ ತಾಣ |

ಹೆಚ್ಚಿನ ಇತಿಹಾಸಕಾರರು ಮೊಘಲರನ್ನು ವೈಭವೀಕರಿಸಿ, ಚೋಳ-ಪಾಂಡ್ಯರ ಸಾಧನೆ ಕುಗ್ಗಿಸಿದರು: ಅಮಿತ್ ಶಾ


ನವದೆಹಲಿ: ಭಾರತದ ಬಹುತೇಕ ಇತಿಹಾಸಕಾರರು ಮೊಘಲರಿಗೆ ಆದ್ಯತೆ ನೀಡುವ, ಅವರನ್ನು ವೈಭವೀಕರಿಸುವ ದಾಖಲೆಗಳಿಗಷ್ಟೇ ಆದ್ಯತೆ ನೀಡಿದ್ದಾರೆ. ಆದರೆ, ಪಾಂಡ್ಯರು ಮತ್ತು ಚೋಳರಂತಹಾ ಭಾರತೀಯ ಚಕ್ರವರ್ತಿಗಳ ವೈಭವೋಪೇತ ಆಡಳಿತಗಳ ಬಗ್ಗೆ ನಿರ್ಲಕ್ಷಿಸಿದ್ದರು ಎಂದಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ನಮಗೆ ಸ್ವಾತಂತ್ರ್ಯ ಸಿಕ್ಕಿದೆ ಮತ್ತು ನಮ್ಮದೇ ಆದ ಸತ್ಯದ ಇತಿಹಾಸ ಬರೆಯುವಲ್ಲಿ ಯಾರೂ ನಮ್ಮನ್ನು ತಡೆಯಲಾರರು ಎಂದು ಹೇಳಿದ್ದಾರೆ.

"ಮಹಾರಾಣಾ: ಸಹಸ್ರ ವರ್ಷ್ ಕಾ ಧರ್ಮ ಯುದ್ಧ" ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅಮಿತ್ ಶಾ, ಇತಿಹಾಸಕಾರರು ವರ್ತಮಾನ ಕಾಲಕ್ಕಾಗಿ ಭೂತ ಕಾಲದ ವೈಭವವನ್ನು ನೆನಪಿಸಬೇಕು ಎಂದು ಕೇಳಿಕೊಂಡರು. ಚರಿತ್ರೆ ಮತ್ತು ಇತರ ಪುಸ್ತಕಗಳನ್ನು ಸರಕಾರಗಳ ಆಣತಿಯಂತೆ ಬರೆಯಬಾರದು, ಸತ್ಯಾಂಶಗಳ ಆಧಾರದಲ್ಲಿ ಇತಿಹಾಸ ರಚನೆಯಾಗಬೇಕು ಎಂದು ಅಮಿತ್ ಶಾ ಹೇಳಿದರು.

ಆಸಕ್ತಿದಾಯಕ ಸತ್ಯ ಸುದ್ದಿಗಳಿಗಾಗಿ ನಮ್ಮನ್ನು ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲಿ ಫಾಲೋ ಮಾಡಿ.

ಅದೆಷ್ಟೋ ಭಾರತೀಯ ದೊರೆಗಳು ವಿದೇಶೀ ಅತಿಕ್ರಮಣಕಾರರ ವಿರುದ್ಧ ವೀರಾವೇಶದಿಂದ ಹೋರಾಡಿ ಅವರನ್ನು ಸೋಲಿಸಿ, ತಮ್ಮ ಭೂಭಾಗಗಳನ್ನು ರಕ್ಷಿಸಿಕೊಂಡಿದ್ದರು. ಆದರೆ, ದುರದೃಷ್ಟವಶಾತ್ ಇದುವರೆಗಿನ ಇತಿಹಾಸ ಪುಸ್ತಕಗಳಲ್ಲಿ ಈ ಕುರಿತ ವಿವರಗಳಿಗೆ ಜಾಗವೇ ಇಲ್ಲದಂತಾಗಿದೆ ಎಂದ ಅವರು, 1,000 ವರ್ಷಗಳ ಕಾಲ ನಮ್ಮ ಸಂಸ್ಕೃತಿ, ಭಾಷೆ ಮತ್ತು ಧರ್ಮದ ರಕ್ಷಣೆಗಾಗಿ ನಡೆದ ಹೋರಾಟವೆಲ್ಲ ವಿಫಲವಾಗಿತ್ತು. ಈಗ ಭಾರತವು ಜಗತ್ತಿನೆದುರು ತಲೆ ಎತ್ತಿ ನಿಲ್ಲುವಂತಾಗಿದೆ ಮತ್ತು ದೇಶದ ಗೌರವಕ್ಕೆ ಮಾನ್ಯತೆ ದೊರೆಯುತ್ತಿದೆ ಎಂದರು.

ನಮ್ಮಲ್ಲಿ ಅದೆಷ್ಟೋ ಚಕ್ರವರ್ತಿಗಳಿದ್ದರು. ಆದರೆ ಇತಿಹಾಸಕಾರರು ಕೇವಲ ಮೊಘಲರ ಮೇಲೆ ಗಮನ ಕೇಂದ್ರೀಕರಿಸಿ, ಅವರ ಬಗ್ಗೆಯೇ ಹೆಚ್ಚು ಬರೆದರು. ಪಾಂಡ್ಯ ಸಾಮ್ರಾಜ್ಯವು 800 ವರ್ಷಗಳ ಕಾಲ ವಿಜೃಂಭಿಸಿತ್ತು. ಅಸ್ಸಾಂನಲ್ಲಿ ಅಹೊಮ್ ಸಾಮ್ರಾಜ್ಯವು 650 ವರ್ಷ ಆಳ್ವಿಕೆ ನಡೆಸಿತ್ತು. ಅವರು ಭಕ್ತಿಯಾರ್ ಖಿಲ್ಜಿ, ಔರಂಗಜೇಬರನ್ನೂ ಸೋಲಿಸಿ, ಅಸ್ಸಾಂನ ಸಾರ್ವಭೌಮತೆಯನ್ನು ಎತ್ತಿ ಹಿಡಿದಿದ್ದರು. ಪಲ್ಲವ ದೊರೆಗಳು 600 ವರ್ಷ ಆಳಿದರು. ತೋಳರು 600 ವರ್ಷಗಳ ಕಾಲ ಆಳಿದರು. ಮೌರ್ಯರಂತೂ ಇಡೀ ದೇಶವನ್ನು --- ಅಫಘಾನಿಸ್ತಾನದಿಂದ ಶ್ರೀಲಂಕಾವರೆಗೆ --- 550 ವರ್ಷಗಳ ಕಾಲ ಆಳ್ವಿಕೆ ನಡೆಸಿದರು. ಗುಪ್ತರು 400 ವರ್ಷ ಮತ್ತು ಗುಪ್ತ ಚಕ್ರವರ್ತಿ ಸಮುದ್ರಗುಪ್ತನು ಮೊದಲ ಬಾರಿಗೆ ಅಖಂಡ ಭಾರತದ ಬಗೆಗೆ ಕನಸು ಕಂಡು, ಇಡೀ ದೇಶದಲ್ಲಿ ತನ್ನ ಆಧಿಪತ್ಯ ಸ್ಥಾಪಿಸಿದ್ದ. ಆದರೆ ಅವರ ಬಗ್ಗೆ ಉಲ್ಲೇಖಿಸುವ ಪುಸ್ತಕಗಳೇ ಸಿಗುತ್ತಿಲ್ಲ ಎಂದು ಅಮಿತ್ ಶಾ ವಿಷಾದ ವ್ಯಕ್ತಪಡಿಸಿದರು.

ಈ ಚಕ್ರವರ್ತಿಗಳ ಉಲ್ಲೇಖವಿರುವ ಪುಸ್ತಕಗಳು ರಚನೆಯಾದಲ್ಲಿ, ಇದುವರೆಗೆ ನಾವು ಕಲಿತಿದ್ದ ಸುಳ್ಳು ಇತಿಹಾಸಗಳೆಲ್ಲ ನಿಧಾನವಾಗಿ ಮರೆಯಾಗಿ, ಸತ್ಯವೇ ವಿಜೃಂಭಿಸುತ್ತದೆ. ಇದಕ್ಕಾಗಿ ಜನರು ಕೆಲಸ ಪ್ರಾರಂಭಿಸಬೇಕಿದೆ ಎಂದ ಗೃಹ ಸಚಿವರು, ಸತ್ಯ ಬರೆಯುವಲ್ಲಿ ಯಾರೂ ನಮ್ಮನ್ನು ತಡೆಯಲಾರರು. ನಮ್ಮದು ಈಗ ಸರ್ವತಂತ್ರ ಸ್ವತಂತ್ರ ರಾಷ್ಟ್ರ. ನಾವು ನಮ್ಮದೇ ಇತಿಹಾಸ ಬರೆಯಬಲ್ಲೆವು ಎಂದರು.

ಇತಿಹಾಸಕಾರರು ಸಣ್ಣಪುಟ್ಟ ಪ್ರಮಾಣದಲ್ಲಿ ಪುಸ್ತಕಗಳನ್ನಷ್ಟೇ ರಚಿಸಿದ್ದಾರೆ. ಆದರೆ ಇಡೀ ಭಾರತದ ಸಮಗ್ರ ಇತಿಹಾಸದ ಬಗ್ಗೆ ಯಾರೂ ಕೆಲಸ ಮಾಡಲಿಲ್ಲ ಮತ್ತು ಇದಕ್ಕಾಗಿ ಉಲ್ಲೇಖಿಸಬಹುದಾದ ಕೆಲವೇ ಪುಸ್ತಕಗಳಷ್ಟೇ ಇವೆ ಎಂದು  ಅಮಿತ್ ಶಾ ವಿಷಾದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು