ಇದನ್ನು ನೀವೇಕೆ ಓದಬೇಕು?
ಪಠ್ಯ ಪುಸ್ತಕ ಪರಿಷ್ಕರಣೆಗಿಂತಲೂ ಮೊದಲೇ ಭಾರಿ ಚರ್ಚೆಗೀಡಾಗಿರುವುದು, ಹಿಂಸಾಚಾರ, ಕೊಲೆಗಳಿಗೂ ಕಾರಣವಾಗಿದ್ದ ಟಿಪ್ಪು ಸುಲ್ತಾನ್ ವಿಷಯ. ನಾವು ಇದುವರೆಗೆ ಓದಿದ ಪಠ್ಯ ವಿಷಯಗಳಲ್ಲಿ ಟಿಪ್ಪು ಮತ್ತು ಹೈದರಾಲಿಯ ಕುರಿತಾಗಿ 'ಜಾತ್ಯತೀತತೆ' ಅಥವಾ 'ಕೋಮುಸೌಹಾರ್ದ' ಹಣೆಪಟ್ಟಿಯಡಿ ಅವರ ಕ್ರೌರ್ಯವನ್ನು ಬದಿಗಿಟ್ಟು, ಅವರಿಬ್ಬರೂ ಕನ್ನಡದ ಮಹಾನ್ ಕಲಿಗಳು ಅಂತೆಲ್ಲ ಪಟ್ಟ ಕಟ್ಟಿ ವಿಜೃಂಭಿಸಲಾಗಿತ್ತು. ನಿಜವಾಗಿ ಅರಿಯಬೇಕಾದ ಮೈಸೂರು ಅರಸರ ಸಾಧನೆಯನ್ನು ಬೋಧಿಸದೆ, ಪರಕೀಯರನ್ನೇ ವೈಭವೀಕರಿಸಲಾಗಿತ್ತು. ಈ ಕುರಿತು ಹಿರಿಯರಾದ ಸಂತೋಷ್ ತಮ್ಮಯ್ಯ ಅವರು ಸಂಶೋಧನಾ ಹಿನ್ನೆಲೆಯಲ್ಲಿ, ಸಾಧಾರ ಸಮೇತ ಲೇಖನವೊಂದನ್ನು ಬರೆದಿದ್ದು, ಅದನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಸಂಸ್ಕೃತಿ ಇಲಾಖೆಯ ಮಾಜಿ ಸಚಿವ ಸಿ.ಟಿ.ರವಿ ಅವರು ಫೇಸ್‌ಬುಕ್‌ನಲ್ಲಿ ಹಂಚಿಕೊಂಡು, ಜನಜಾಗೃತಿ ಮೂಡಿಸಲು ಪ್ರಯತ್ನಿಸಿದ್ದಾರೆ. ಈ ಲೇಖನ ಯಥಾವತ್ ಆಗಿ ಇಲ್ಲಿದೆ. ಕೃಪೆ: ಸಂತೋಷ್ ತಮ್ಮಯ್ಯ
ಮೇ ೪ರಂದು ಶ್ರೀರಂಗಪಟ್ಟಣ ಕೋಟೆಯ ವಾಟರ್ ಗೇಟ್ ಬಳಿ ಬ್ರಿಟಿಷರು ಟಿಪ್ಪುವನ್ನು ಬಡಿದು ತಿಂಗಳಾದ ನಂತರ, ಅಂದರೆ ೧೭೯೯ರ ಜೂನ್ ೩೦ ರಂದು ಪುಟ್ಟ ಮಹಾರಾಜ ಮುಮ್ಮಡಿ ಕೃಷ್ಣದೇವರಾಯ ಒಡೆಯರಿಗೆ ಪಟ್ಟಾಭಿಷೇಕವನ್ನು ನೆರವೇರಿಸಲಾಯಿತು. ಅಂದು ತುಂಬಿದ ಅರಮನೆಯ ದರ್ಬಾರಿನಲ್ಲಿ ಮಹಾರಾಜರ ಅಜ್ಜಿ ಲಕ್ಷ್ಮಮ್ಮಣ್ಣಿ, ಆರ್ಥರ್ ವೆಲ್ಲೆಸ್ಲಿ, ಜೇಮ್ಸ್ ಸ್ಟುವರ್ಟ್, ಹಿಂದಿನ ದಿವಾನ ಪೂರ್ಣಯ್ಯ, ಮಿಲಿಟರಿ ಅಧಿಕಾರಿಗಳಾದ ರಾಬರ್ಟ್ ಟೈಲರ್ ಮತ್ತು ಕ್ಯಾಪ್ಟನ್ ಬ್ರೌನ್ ಅವರ ಸಮ್ಮುಖಲ್ಲಿ ಬ್ರಿಟಿಷರು ಸೂಚನೆಯೊಂದನ್ನು ಎಲ್ಲರೂ ಕೇಳಿಸುವಂತೆ ಗಟ್ಟಿಯಾಗಿ ಓದಿ ಹೇಳಿದರು.
“ಮಹಾರಾಜರ ದರ್ಬಾರಿಗೆ ಚಾಕರಿಗೆಂದು ಬಂದ ಹೈದರ್ ಸಾಬಿಯು ಅರಮನೆಗೆ ದ್ರೋಹವನ್ನು ಬಗೆದು, ತನ್ನದೇ ಗುಂಪನ್ನು ನಿರ್ಮಿಸಿಕೊಂಡು, ಅನ್ನ ನೀಡಿದ ಮಹಾರಾಜರಿಗೂ, ಸಂಸ್ಥಾನದ ಪ್ರಜೆಗಳಿಗೂ ದ್ರೋಹವನ್ನು ಬಗೆದಿರುವುದು ಮಾತ್ರವಲ್ಲದೆ, ಆತನ ಮಗನಾದ ಟೀಪುವು ಸಂಸ್ಥಾನದ ಪ್ರಜೆಗಳ ಧರ್ಮವನ್ನೂ, ಗುಡಿಗೋಪುರಗಳನ್ನೂ ಒಡೆದು ಕಿರುಕುಳವನ್ನು ಕೊಟ್ಟಿರುತ್ತಾನೆ. ಸಂಸ್ಥಾನಕ್ಕೆ ಬೆಲೆಯನ್ನು ಕೊಡದೆ ತನಗೆ ತಾನೇ ನವಾಬನೆಂಬ ಬಿರುದನ್ನು ಕೊಟ್ಟುಕೊಂಡು ನೆರೆ ರಾಜ್ಯಗಳು ಮತ್ತು ಸ್ವಸಂಸ್ಥಾನದಲ್ಲೂ ಜನರಿಗೆ ಕಿರುಕುಳವನ್ನು ನೀಡಿರುತ್ತಾನೆ. ಮಹಾರಾಜರನ್ನೂ, ರಾಜಪರಿವಾರದವರನ್ನೂ ಗೃಹಬಂಧನದಲ್ಲಿರಿಸಿ ಉತ್ಸವಗಳನ್ನೂ ನಿರ್ಬಂಧಿಸಿ ನೋವನ್ನುಂಟುಮಾಡಿರುತ್ತಾನೆ. ಅರಮನೆಗೆ ನಿಷ್ಠರಾಗಿದ್ದ ಜನರನ್ನು ಧೂರ್ತತನದಿಂದ ಕೊಲ್ಲಿಸಿರುತ್ತಾನೆ. ದಸರೆಯನ್ನು ಆಚರಿಸದೆ ಜನರು ಸೂತಕವನ್ನು ಅನುಭವಿಸಿರುತ್ತಾರೆ. ಕಂಪನಿ ಸರ್ಕಾರದ ನೆರವಿನಿಂದ ಆ ಧೂರ್ತನನ್ನು ಸದೆಬಡಿದು ಮಹಮಹಿಮರಾದ ಪುಟ್ಟ ಮಹಾರಾಜರಾದ ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರಿಗೆ ಪಟ್ಟವನ್ನು ಕಟ್ಟಲಾಗಿದೆ. ಇನ್ನು ಮುಂದೆ ಸಂಸ್ಥಾನಕ್ಕೆ ಕೃಷ್ಣರಾಜರೇ ಭೂಪಾಲರಾಗಿದ್ದು. ಸಕಲ ಪ್ರಜೆಗಳ ಯೋಗಕ್ಷೇಮವನ್ನು ಪಾಲಿಸಲಿದ್ದಾರೆ. ಈ ಹಿಂದಿನ ದಿವಾನರುಗಳು ಧೂರ್ತ ಸಾಬಿಗಳಿಗೂ ದಿವಾನರಾಗಿದ್ದುದ್ದನ್ನು ಕಂಪನಿ ಸರ್ಕಾರವು ಕ್ಷಮಿಸುತ್ತದೆ ಮತ್ತು ಮುಂದಕ್ಕೆ ಮಹಾರಾಜರಿಗೆ ಸಕಲ ಸಹಕಾರವನ್ನು ನೀಡಬೇಕೆಂದು ಆದೇಶಿಸುತ್ತದೆ. ಇದಕ್ಕೆ ತಪ್ಪಿ ನಡೆದರೆ ಅದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ”
ಆಸಕ್ತಿದಾಯಕ ಸುದ್ದಿಗಳ ಸತ್ಯಾಂಶಕ್ಕಾಗಿ ನಮ್ಮನ್ನು ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲಿ ಫಾಲೋ ಮಾಡಿ.
ಅರಮನೆ ದಸ್ತಾವೇಜಿನಲ್ಲೇ ಇರುವ ಈ ದಾಖಲೆಗಳನ್ನು ಯಾವ ಇತಿಹಾಸ ಪುಸ್ತಕಗಳೂ ದಾಖಲಿಸಲಿಲ್ಲ, ಯಾವ ವಿದ್ವಾಂಸನೂ ಸಂಶೋಧನಾ ಪ್ರಬಂಧವನ್ನು ಬರೆಯಲಿಲ್ಲ. ಯಾವ ಗಜೇಟಿಯರುಗಳೂ ಇದನ್ನು ಉಲ್ಲೇಖಿಸಲಿಲ್ಲ! ವಿಪರ್ಯಾಸವೆಂದರೆ ಅದೇ ಮೈಸೂರು ಸಂಸ್ಥಾನ ಇದ್ದಾಗ ರಚನೆಯಾಗಿದ್ದ ಪಠ್ಯಪುಸ್ತಕಗಳಲ್ಲೂ ಈ ದಾಖಲೆಗಳನ್ನು ಹೊರಗಿಟ್ಟು ಇಡೀ ಮೈಸೂರು ಇತಿಹಾಸವನ್ನು ನಾಲ್ಕು ಆಂಗ್ಲೋ-ಮೈಸೂರು ಯುದ್ಧಗಳಿಗೆ ಸೀಮಿತಮಾಡಿಡಲಾಗಿತ್ತು! ನಂತರ ರಚನೆಯಾದ ಪಠ್ಯಪುಸ್ತಕಗಳಲ್ಲಿ ಕಮ್ಯುನಿಸ್ಟ್ ಮಾನಸಿಕತೆಗೆ ಹೊಂದುವಂತಹ ಭಾಗಗಳನ್ನು ಮಾತ್ರ ಸೇರಿಸಿ ಸಂಸ್ಥಾನದಲ್ಲಿ ಮಹತ್ವದ್ದೆನಿಸಿದ್ದ ಐತಿಹಾಸಿಕ ಮಳವಳ್ಳಿ ಯುದ್ಧ, ವೀರಾಜಪೇಟೆಯ ಹುಟ್ಟು, ದೇವಾಟ್‌ಪರಂಬ್ ಹತ್ಯಾಕಾಂಡ, ಹೈದರನು ಪೇಶ್ವೆಗಳಿಗೆ ಕೊಡುತ್ತಿದ್ದ ಲಂಚದ ವಿವರಗಳೆಲ್ಲವನ್ನೂ ಮರೆಮಾಚಿ ಇತಿಹಾಸವನ್ನು ರಚಿಸಲಾಯಿತು. ಬ್ರಿಟಿಷರು ಬರೆದ ಗಜೇಟಿಯರುಗಳೂ ಕೂಡಾ ಅದರ ಬಗ್ಗೆ ಸರಿಯಾದ ಬೆಳಕು ಚೆಲ್ಲಲಿಲ್ಲ. ಇವೆಲ್ಲದರ ಪರಿಣಾಮವಾಗಿ ಸ್ವಾತಂತ್ರ್ಯಾನಂತರದ ಪಠ್ಯಪುಸ್ತಕಗಳಲ್ಲಿ ಕೂಡಾ ಇವು ಸ್ಥಾನ ಪಡೆದುಕೊಳ್ಳಲಿಲ್ಲ. ಕಾರಣ ಭಾರತ ಯಾವತ್ತೂ ಒಂದು ರಾಷ್ಟ್ರವಾಗಿರಲಿಲ್ಲ, ಹೋರಾಟದ ನೆಲವಾಗಿರಲಿಲ್ಲ, ಮೌಲ್ಯಗಳೇ ಇರಲಿಲ್ಲ, ಕ್ಷಾತ್ರತ್ವವಂತೂ ಇರಲೇ ಇಲ್ಲ ಎನ್ನುವುದನ್ನು ಕಮ್ಯುನಿಸ್ಟರಿಗೆ ಬಿಂಬಿಸಬೇಕಿತ್ತು. ಕ್ರಮೇಣ ಕಮ್ಯುನಿಸ್ಟರು ಕೊನೆಯುಸಿರೆಳೆಯುತ್ತಿದ್ದರೂ ಈ ಎಲ್ಲ ಧೋರಣೆಗಳು ಸೆಕ್ಯುಲರಿಸಮ್ಮಿನ ಮುಖವಾಡವನ್ನು ಧರಿಸಿ ವ್ಯವಸ್ಥೆಗೆ ಒಗ್ಗಿಯೂ ಹೋದವು. ಅದರ ಪರಿಣಾಮವೇ ಬರಗೂರು ಗ್ಯಾಂಗಿನ ಪಠ್ಯಪುಸ್ತಕಗಳು.
ಆ ಕಾರಣಕ್ಕೆ ಇದೇ ಅರಮನೆ ದಾಖಲೆಗಳನ್ನು ಡಾ.ಚಿದಾನಂದ ಮೂರ್ತಿಗಳು ಉಲ್ಲೇಖಿಸಿದಾಗ ಅದನ್ನು ಇದೇ ಬುದ್ದಿಜೀವಿ ಗ್ಯಾಂಗ್ ಕೋಮುವಾದ ಎಂದು ಜರೆದಿತ್ತು. ಬ್ರಿಟಿಷರು ಕಣ್ಣಾರೆ ಕಂಡು ಬರೆದಿದ್ದನ್ನೂ ಈ ಗ್ಯಾಂಗ್ ಕೋಮುವಾದ ಎಂದು ಕರೆಯಿತು! ಇನ್ನು ಇವರು ರೋಹಿತ್ ಚಕ್ರತೀರ್ಥ ಸಂಪಾದಿಸಿದ ಪಠ್ಯಪುಸ್ತಕವನ್ನು ಕೋಮುವಾದ ಕರೆಯದಿದ್ದಾರೆಯೇ? ಇದು ಸದ್ಯದ ವಿವಾದಕ್ಕೆ ಕಾರಣ ಮತ್ತು ಪೂರ್ವರಂಗ.
ಸುಳ್ಳಿನ ಸುತ್ತ 'ಸೆಕ್ಯುಲರಿಸಂ' ಹೆಸರಲ್ಲಿ ತುಷ್ಟೀಕರಣ ರಾಜಕೀಯ
ರಾಜ್ಯದಲ್ಲಿ ಯಾವಾಗ ಪಠ್ಯ ಪುಸ್ತಕಗಳೆಂಬುದು ಪ್ರಕಟವಾಗತೊಡಗಿತೋ ಅಂದಿನಿಂದಲೂ ಪಠ್ಯಗಳಲ್ಲಿ ತಪ್ಪದೆ ಉಲ್ಲೇಖವಾಗುತ್ತಿದ್ದ ಕೆಲವು ಸಂಗತಿಗಳಿದ್ದವು. ಅವುಗಳಲ್ಲಿ ಒಂದು “ಮಧ್ಯ ಏಷ್ಯಾದಿಂದ ಬಂದ ಆರ್ಯರು ಭಾರತದಲ್ಲಿದ್ದ ದ್ರಾವಿಡರನ್ನು ದಕ್ಷಿಣಕ್ಕೆ ಒದ್ದೋಡಿಸಿದರು” ಎಂಬುದಾಗಿದ್ದರೆ ಇನ್ನೊಂದು, “ದಕ್ಷಿಣ ಭಾರತದ ಇತಿಹಾಸದಲ್ಲಿ ಅನ್ಯಧರ್ಮ ಸಹಿಷ್ಣುವೂ, ಸ್ವಾತಂತ್ರ್ಯ ಹೋರಾಟಗಾರನೂ ಆಗಿದ್ದ ಟಿಪ್ಪು” ಎಂಬ ಪಾಠ. ಇವೆರಡರ ಮೂಲಕ ಸೆಕ್ಯುಲರ್ ಪಕ್ಷಗಳು ತಮ್ಮ ಪ್ರಣಾಳಿಕೆಯನ್ನೇ ಸೃಷ್ಟಿಸಿಕೊಂಡು ತುಷ್ಟೀಕರಣದ ರಾಜಕಾರಣವನ್ನು ಆರಂಭಿಸಿದರು. ಇದನ್ನು ಪ್ರಶ್ನಿಸಿದವರೆಲ್ಲರೂ ಕೋಮುವಾದಿಗಳೂ, ಪ್ರಗತಿ ವಿರೋಧಿಗಳೂ ಆಗತೊಡಗಿದರು. ಬರಗೂರು ಗ್ಯಾಂಗಿನ ಪಠ್ಯಪುಸ್ತಕ ಸಮಿತಿಯಂತೂ ಈ ಎರಡು ವಿಷಯಗಳ ಸುತ್ತಲೇ ಇಡೀ ಸಮಾಜ ನಿಂತಿದೆ ಎನ್ನುವಂತೆ ಪಠ್ಯಗಳನ್ನು ಬರೆದು ಅಚ್ಚುಹಾಕತೊಡಗಿದರು. ಸೆಕ್ಯುಲರ್ ಪಕ್ಷಗಳು ಎಸೆದ ಬಿಸ್ಕೇಟುಗಳಿಗೆ ಆಸೆಪಟ್ಟ ಸಮಿತಿ ಪ್ರತೀ ಬಾರಿ ಮತ್ತಷ್ಟು ಭಯಾನಕವಾಗಿ ಇತಿಹಾಸವನ್ನು ತಿರುಚಲಾರಂಭಿಸಿದರು.
ಹಸೀ ಸುಳ್ಳಿನ ಪಠ್ಯ ರಚನೆಗೆ ಆಧಾರವಾದರೂ ಏನು?
ಶಿಕ್ಷಣ ತಜ್ಞ ಮುಡಂಬಡಿತ್ತಾಯ ಅವರು ಅಧ್ಯಕ್ಷರಾಗಿದ್ದ ಸಮಿತಿ ಕೂಡಾ ಮೈಸೂರಿನ ಇತಿಹಾಸವನ್ನು ಚಿತ್ರಿಸಿದ್ದು ಹೀಗೆಯೇ. “ಚಿಕ್ಕದೇವರಾಯ ಒಡೆಯರ ನಂತರ ಪಟ್ಟಕ್ಕೆ ಬಂದ ಮೈಸೂರಿನ ಅರಸರು ಅತ್ಯಂತ ದುರ್ಬಲರಾಗಿದ್ದರು. ಆ ಸಮಯದಲ್ಲಿ ಸೇನಾಪತಿಯಾಗಿದ್ದ ಹೈದರಾಲಿಯು ಮೈಸೂರನ್ನು ವಶಪಡಿಸಿಕೊಂಡರು. ಅತನ ಮರಣಾನಂತರ ಮಗ ಟಿಪ್ಪು ಸುಲ್ತಾನ ೧೭೯೯ರವರೆಗೆ ಬ್ರಿಟೀಷರ ವಿರುದ್ಧ ಹೋರಾಟವನ್ನು ನಡೆಸಿದನು. ಅನೇಕ ಜನಪರ ಕಾರ್ಯಗಳನ್ನು ಕೈಗೊಂಡನು” ಎಂದು ಮುಡಂಬಡಿತ್ತಾಯರ ಪಠ್ಯ ಸಾಗುತ್ತದೆ. ಮುಡಂಬಡಿತ್ತಾಯ ಸಮಿತಿಯ ಇಂಥಾ ಪಾಠಕ್ಕೆ ಆಕರ ಯಾವುದು? ಅರಮನೆ ಕಡತಗಳೂ ಹೀಗಿರಲಿಲ್ಲ, ಬ್ರಿಟಿಷ್ ಬರಹಗಳಂತೂ ಹೀಗೆಲ್ಲ ಇಲ್ಲವೇ ಇಲ್ಲ. ಜೊತೆಗೆ ಹೈದರ್-ಟಿಪ್ಪು ಕಾಲದ ಯಾವ ಶಾಸನಗಳೂ ಲಭ್ಯವಿಲ್ಲ! ಹಾಗಾದರೆ ಹೀಗೇಕೆ ಪಠ್ಯಗಳು ರಚನೆಯಾದವು? ಮುಡಂಬಡಿತ್ತಾಯರಂಥಾ ತಜ್ಞರಿಗೇ ಹೀಗೆ ಸುಳ್ಳನ್ನೇ ಕಟ್ಟಿಕೊಡುವಂಥಾ ಅನಿವಾರ್ಯತೆ ಬಂದಿತ್ತೆಂದರೆ ಸೆಕ್ಯುಲರ್‌ವಾದಿಗಳ ಹಿಡಿತ ಅದೆಂಥದ್ದಿರಬಹುದು? ಹೀಗೆ ಯಾವ ಆಕರಗಳೂ ಇಲ್ಲದೆ ಟಿಪ್ಪುವಿನ ಜನಪರ ಕಾರ್ಯಗಳೆಂಬ ಹಸೀ ಸುಳ್ಳನ್ನೇ ಆರನೇ ಕ್ಲಾಸಿನ ಮಕ್ಕಳಿಗೆ ವ್ಯವಸ್ಥಿತವಾಗಿ ತುಂಬಿಸಲಾಯಿತು. ಆಶ್ಚರ್ಯವೆಂದರೆ ಇಂಥಾ ಸುಳ್ಳಿನ ಪಾಠವನ್ನು ಪಠ್ಯದಲ್ಲಿ ಹಾಕಿದಾಗ ಅಂದು ಯಾವ ಸಾಹಿತಿಯೂ ಇದು ಮಾನವ ವಿರೋಧಿ, ಮಕ್ಕಳ ಮನಸ್ಸಲ್ಲಿ ಸುಳ್ಳನ್ನು ತುಂಬಿಸಲಾಗುತ್ತದೆ ಎನ್ನಲಿಲ್ಲ, ಯಾರೂ ಪ್ರಶಸ್ತಿಯನ್ನು ಹಿಂದಿರುಗಿಸಲಿಲ್ಲ. ಹಾಗಾದರೆ ಆ ಸಾಹಿತಿಗಳು ತಮ್ಮ ಸಾಹಿತ್ಯದಲ್ಲಿ ಶೋಧಿಸಿದ ಸತ್ಯದ ಪ್ರಮಾಣ ಅದೆಷ್ಟಿದ್ದಿರಬಹುದು!? ಇದೇ ಪಠ್ಯ ಮುಂದುವರಿಯುತ್ತಾ ನಾಲ್ವಡಿಯವರ ಸಾಧನೆಯನ್ನು ಒಂದೇ ಸಾಲಿಗೆ ಸೀಮಿತ ಮಾಡಿದಾಗಲೂ ಯಾರೂ ಚರ್ಚೆ ಎಬ್ಬಿಸಲಿಲ್ಲ. ಒಡೆಯರೆಂದರೆ ನಾಡಿನ ಅಸ್ಮಿತೆ ಎಂದು ಯಾವ ಕನ್ನದಪರ ಸಂಘಟನೆಗಳೂ ಪತ್ರಿಕಾಗೋಷ್ಠಿ ಮಾಡಿರಲಿಲ್ಲ.
ಮೈಸೂರಿನ ಈ ಪಾಠವನ್ನು ಬರಗೂರು ಗ್ಯಾಂಗ್ ಪರಿಷ್ಕರಿಸಿದ್ದು ಇನ್ನೂ ಮಜವಾಗಿದೆ.
“ದಳವಾಯಿ ನಂಜರಾಜಯ್ಯನ ಸೇನೆಯಲ್ಲಿ ಸಮರ್ಥ ಸೇನಾನಿಯಾಗಿದ್ದ ಹೈದರನು ಶೂರನೂ, ಸಾಹಸಿಯೂ ಆಗಿದ್ದ. ಮರಾಠರನ್ನು ಸೋಲಿಸಿದ್ದ. ರಾಜ್ಯದ “ಕಾರ್ಯಕರ್ತ” ತಾನೆಂದು ಕರೆದುಕೊಂಡು ಎರಡನೆಯ ಕೃಷ್ಣರಾಜ ಒಡೆಯರನ್ನು ಬದಿಗೊತ್ತಿದನು” ಇದೊಂದು ಸೋಜಿಗವೇ ಸರಿ. ಏಕೆಂದರೆ ಹೈದರ್ ದಳವಾಯಿ ನಂಜರಾಜಯ್ಯನ ಸೇನೆಯಲ್ಲಿ ದಳವಾಯಿಯಗಿದ್ದ ಎನ್ನಲು ಯಾವ ಆಕರಗಳೂ ಇಲ್ಲ! ನಂಜರಾಜಯ್ಯ ಹೈದರನನ್ನು ನಂಬುತ್ತಲೂ ಇರಲಿಲ್ಲ. ಅರಮನೆ ಕಡತಗಳು ಅದಕ್ಕೆ ಸಾಕ್ಷಿಯಾಗಿ ಬೇರೆಯೇ ಮಾಹಿತಿಯನ್ನು ಬಿಚ್ಚಿಡುತ್ತವೆ. ಮುಮ್ಮಡಿ ಕೃಷ್ಣರಾಜ ಒಡೆಯರ ಪಟ್ಟಾಭಿಷೇಕದ ದರ್ಬಾರಿನಲ್ಲಿ ಓದಿದ ಪತ್ರ ಕೂಡಾ “ಒಡೆಯರ ಬಳಿಗೆ ಚಾಕರಿಗೆಂದು ಬಂದ ಕೂಲಿಯವ” ಎಂದೇ ಹೈದರನನ್ನು ಬಣ್ಣಿಸುತ್ತದೆ. ಅಲ್ಲದೆ ಮೈಸೂರು ಮ್ಯಾನ್ಯುವಲ್‌ನಲ್ಲಿ ಇದೇ ದಳವಾಯಿ ನಂಜರಾಜಯ್ಯನು, (೧೭೩೯) “ಹೈದರಾಲಿ ಖಾನನಿಗೆ ೫೦ ಕುದುರೆಗಳನ್ನೂ, ೧೦೦ ಜನ ಪೇದೆಗಳನ್ನೂ ಗೊತ್ತು ಮಾಡಿ ಇಡುವುದು ಕೂಡತಕ್ಕ ಕೆಲಸವಲ್ಲ, ಇವನ ಮಗನ ಕಾಲಕ್ಕಾದರೂ ತೊಂದರೆ ಸಂಭವಿಸಬಹುದು” ಎಂದು ಮಹಾರಾಜರಿಗೆ ಅರಿಕೆಯನ್ನು ಮಾಡಿದ್ದ! ಹೀಗೆ ನಂಜರಾಜಯ್ಯ ರಾಜರಿಗೆ ದೂರುಕೊಟ್ಟ ಕೆಲವೇ ದಿನಗಳಲ್ಲಿ ಆತನ ಶವ ಪಶ್ಚಿಮವಾಹಿನಿಯ ಬಳಿ ಕಾವೇರಿ ತೀರದಲ್ಲಿ ಪತ್ತೆಯಾಯಿತು! ಅರಮನೆ ಕಡತಗಳಲ್ಲದೆ ದಳವಾಯಿ ನಂಜರಾಜಯ್ಯನ ಬಗ್ಗೆ ಬರೆದವರೆಲ್ಲರೂ ಇದನ್ನು ಉಲ್ಲೇಖ ಮಾಡಿದ್ದಾರೆ. ಆದರೆ ಬರಗೂರರಿಗೆ ಮಾತ್ರ ಹೈದರನು ನಂಜರಾಜಯ್ಯನ ಸೇನೆಯ ಮಹಾನ್ ಯೋಧನಾಗಿ ಕಂಡಿದ್ದಾನೆ. ಬರಗೂರರಿಗೆ ಅಂಥ ದಾಖಲೆಗಳು ಎಲ್ಲಿ ಸಿಕ್ಕವು ಎಂದು ಯಾರೂ ಕೇಳಲಿಲ್ಲ. ಅಲ್ಲದೆ ಹೈದರನು ಮರಾಠರನ್ನು ಯುದ್ಧದಲ್ಲಿ ಸೋಲಿಸಿದನೆನ್ನಲು ಕೂಡ ಯಾವ ಆಕರಗಳೂ ಇಲ್ಲ. ಪೇಶ್ವೆಗಳ ಸರದಾರ ರಂಗರಾವ್, ವಿಠಲ್ ರಾವ್, ಮಾಧವರಾವ್ ಸೈನ್ಯಕ್ಕೆ ಹೆದರಿದ್ದ ಹೈದರ ಕಪ್ಪ ಕಾಣಿಕೆಗಳನ್ನು ನೀಡಿ ಹಿಂದಕ್ಕೆ ಕಳುಹಿಸುತ್ತಿದ್ದ ಎಂಬ ಬಹಿರಂಗ ಸತ್ಯದ ನೆತ್ತಿಗೆ ಹೊಡೆದು ಬರಗೂರು ಗ್ಯಾಂಗ್ ಹೈದರ ಮರಾಠರನ್ನೇ ಸೋಲಿಸಿದ ಎಂದು ಚಿತ್ರಿಸಿತ್ತು.
ಹೀಗೆ ಬರಗೂರು ಗ್ಯಾಂಗ್ ಆರು ಪುಟಗಳುದ್ದಕ್ಕೂ ಹೈದರ್-ಟಿಪ್ಪು ಬಗ್ಗೆ ಸುಳ್ಳನ್ನೇ ಪ್ರಕಟಿಸಿದೆ. ಟಿಪ್ಪುವನ್ನು ಹೇಗೆಲ್ಲ ಹೊಗಳಬಹುದೋ ಹಾಗೆಲ್ಲಾ ಹೊಗಳಿದೆ. ಆತನ ಕಲಾ ರಸಿಕತೆ, ವಾಸ್ತು ಶೈಲಿ ಮತ್ತು ರೇಷ್ಮೆ ಬೆಳೆಯನ್ನು ಕೂಡಾ ಆತನ ತಲೆಗೆ ಕಟ್ಟಿದೆ. ಕಾಂಗ್ರೆಸ್ ಅವಧಿಯಲ್ಲಿ ಆಚರಿಸಲಾದ ಟಿಪ್ಪು ಜಯಂತಿಗೆ ಬೇಕಾದ ಬೊಗಳೆ ಸಂಗತಿಗಳೆಲ್ಲವನ್ನೂ ಆರನೇ ಕ್ಲಾಸಿನಲ್ಲೇ ತುರುಕಿದೆ.
ಹೊಸ ಪಠ್ಯದಲ್ಲಿ ಆಧಾರರಹಿತವಾಗಿದ್ದ ಜಳ್ಳುಗಳಿಲ್ಲ
ಇವೆಲ್ಲವನ್ನೂ ೨೦೨೨ರ ಪಠ್ಯದಲ್ಲಿ ಪರಿಷ್ಕರಿಸಲಾಗಿದೆ. ಅಂದರೆ ಜಳ್ಳುಗಳೆಲ್ಲವನ್ನೂ ಹಾರಿಸಲಾಗಿದೆ. “ಚಿಕ್ಕದೇವರಾಜ ಒಡೆಯರು ಪ್ರಸಿದ್ಧ ದೊರೆಯಾಗಿದ್ದರು. ಅವರ ನಂತರ ಹೈದರಾಲಿಯು ಆಳ್ವಿಕೆಯನ್ನು ಅಕ್ರಮವಾಗಿ ವಶಪಡಿಸಿಕೊಂಡನು. ಅವನ ಮತ್ತು ಅವನ ಮಗ ಟಿಪ್ಪು ಸುಲ್ತಾನ್ ೧೭೬೧ರಿಂದ ೧೭೯೯ರವರೆಗೆ ಆಡಳಿತ ನಡೆಸಿದರು. ಟಿಪ್ಪು ಮರಣದ ನಂತರ ಮೈಸೂರಿನ ಆಡಳಿತವು ಮತ್ತೆ ಒಡೆಯರ ಕೈಗೆ ಬಂತು” ಎಂದು ಪಾಠ ಮುಂದುವರಿಯುತ್ತದೆ. ಅಂದರೆ ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಪರಿಷ್ಕೃತ ಪಠ್ಯದಲ್ಲಿ ಆಧಾರವಿದ್ದ ಮಾಹಿತಿಗಳನ್ನು ಮಾತ್ರ ಅಳವಡಿಸಿಕೊಳ್ಳಲಾಗಿದೆ. ಆ ಸತ್ಯವನ್ನೇ ಹೇಳಿದ್ದರಲ್ಲಿ ಏನು ತಪ್ಪಿದೆ? ಮೈಸೂರಿನ ಇತಿಹಾಸವನ್ನು ಒಡೆಯರ್ ಕೇಂದ್ರಿತವಾಗಿ ಬರೆಯಬೇಕೋ? ಹೈದರ್-ಟಿಪ್ಪು ಕೇಂದ್ರಿತವಾಗಿ ಬರೆಯಬೇಕೋ? ಕಟ್ಟಿದವರು ಮುಖ್ಯವೋ? ಆಕ್ರಮಕರು ಮುಖ್ಯವೋ?
ಕೊಡಗಿನ ವೀರ ಯೋಧರು ಟಿಪ್ಪುಗೆ ಪಾಠ ಕಲಿಸಿದ ವಿಚಾರ ಎಲ್ಲಿ?
ಸ್ವತಂತ್ರ್ಯಾನಂತರ ಒಂದು ಸಿದ್ಧ ಚೌಕಟ್ಟಿಗೆ ಕಟ್ಟುಬಿದ್ದಿದ್ದ ಪಠ್ಯಪುಸ್ತಕ ರಚನಾ ಕ್ರಮವನ್ನು ಈಗಿನ ಪರಿಷ್ಕೃತ ಸಮಿತಿ ಮುರಿದಿದೆ. ಅಷ್ಟಕ್ಕೂ ಈ ಸಮಿತಿ ಹೊಸದನ್ನೇನೂ ಸೇರಿಸಿಲ್ಲ. ಹೈದರ್-ಟಿಪ್ಪುವನ್ನು ಎಷ್ಟು ಉಲ್ಲೇಖಿಸಬೇಕೋ ಅಷ್ಟನ್ನು ಮಾತ್ರ ಉಲ್ಲೇಖಿಸಿದೆ. ಹೇಳಬೇಕೆಂದರೆ ಹೈದರ್-ಟಿಪ್ಪುವಿನ ಇತಿಹಾಸವನ್ನು ಮತ್ತಷ್ಟು ಸೇರಿಸಬಹುದಿತ್ತು. ಹೈದರನಿಗೇಕೆ ಕೊಡಗು-ಮಲಬಾರನ್ನು ಗೆಲ್ಲಲಾಗಲಿಲ್ಲ ಎಂಬುದನ್ನು ಹೇಳಬಹುದಿತ್ತು, ನಾಯರ್‌ಗಳು ಟಿಪ್ಪುವಿಗೆ ಎಂಥಾ ಮಾರಣಾಂತಿಕ ಪೆಟ್ಟನ್ನು ಕೊಟ್ಟರು ಎಂದು ವಿವರಿಸಬಹುದಿತ್ತು. ನಡುಂಕೊಟ್ಟಂ ಯುದ್ಧಾನಂತರ ಟಿಪ್ಪು ಏಕೆ ಕುಂಟುತ್ತಿದ್ದ ಎನ್ನುವುದನ್ನು ವಿವರಿಸಬಹುದಿತ್ತು. ಕೊಡಗಿನ ಅಪ್ಪಚ್ಚಿ ಮಂದಣ್ಣ, ಕುಲ್ಲೇಟಿ ಪೊನ್ನಣ್ಣ-ಮಾಣಿಚ್ಚರು ಟಿಪ್ಪುವನ್ನು ಹೇಗೆ ಹೊಡೆದರು ಎಂದು ವರ್ಣಿಸಬಹುದಿತ್ತು. ಏಕೆಂದರೆ ಇವೆಲ್ಲಕ್ಕೂ ಪ್ರತ್ಯಕ್ಷ ದಾಖಲೆಗಳಿದ್ದವು. ಇವನ್ನೆಲ್ಲಾ ವಿವರಿಸಲು ಈಗಿನ ಸಮಿತಿಗೆ ಬರಗೂರರಂತೆ ಸುಳ್ಳಿನ ಮೊರೆ ಹೋಗಬೇಕಿರಲಿಲ್ಲ. ಆದರೆ ಪರಿಷ್ಕರಣಾ ಸಮಿತಿ ಆರನೇ ಕ್ಲಾಸಿನ ಮಿತಿಯಿಂದ ನೀಡಬೇಕಾದುದನ್ನು ಮಾತ್ರ ನೀಡಿದೆ. ಈ ಪಠ್ಯದ ಮೂಲಕ ಟಿಪ್ಪುವನ್ನು ಅನ್ಯಧರ್ಮ ಸಹಿಷ್ಣು ಎಂದು ಓದುವ ಕೊಡವರ ಮಗು, ಇಂಥವನು ತನ್ನ ಮುತ್ತಜ್ಜನನ್ನೇಕೆ ಕೊಂದ ಎಂದು ಕೇಳುವ ಪ್ರಮೇಯವನ್ನಂತೂ ದೂರ ಮಾಡಿದೆ. ಒಡೆಯರ್ ಸಾಧನೆಗಳನ್ನು ಸಮರ್ಥವಾಗಿ ಚಿತ್ರಿಸಿದೆ, ಮೈಸೂರ್ ಲ್ಯಾನ್ಸರ್ ತುಕಡಿಯ ಐತಿಹಾಸಿಕ ಹೈ ವಿಜಯವನ್ನು ಪ್ರಸ್ತಾಪ ಮಾಡಿದೆ, ಮೊದಲ ಮತ್ತು ಎರಡನೆಯ ಮಹಾಯುದ್ಧದಲ್ಲಿ ಭಾರತೀಯ ಸೈನಿಕರ ಕೊಡುಗೆಯನ್ನು ಉಲ್ಲೇಖಿಸಿದೆ. ಇವೆಲ್ಲವೂ ಹೊಸ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ದಿಟ್ಟ ನಿರ್ಧಾರಗಳು. ಆದರೆ ಪಠ್ಯಪುಸ್ತಕವನ್ನು ವಿರೋಧಿಸುವವರೆಲ್ಲರೂ ಇದ್ಯಾವುದರ ಬಗ್ಗೆ ಚಕಾರವೆತ್ತುತ್ತಿಲ್ಲ. ಬಹುಶಃ ನಾಡಿನ ಹೆಮ್ಮೆಯನ್ನು ಚಿತ್ರಿಸಿದ್ದನ್ನು ಮರೆಮಾಚಲೆಂದೇ ಕೆಲಸಕ್ಕೆ ಬಾರದ ಸಂಗತಿಗಳನ್ನೆತ್ತಿ ವಿವಾದ ಮಾಡುತ್ತಿದ್ದಾರೆ. ಎಲ್ಲವೂ ಬಿಸ್ಕೆಟಿನಾಸೆಗಾಗಿ, ಪ್ರಣಾಳಿಕೆಗೆ ಸರಕುಗಳ ಕೊರತೆಯಿಂದಾಗಿ.!!
-ಸಂತೋಷ್ ತಮ್ಮಯ್ಯ
ಟಿಪ್ಪುವಿನ ಕುರಿತು ಏಳನೇ ತರಗತಿ ಪಠ್ಯದಲ್ಲಿ ಪರಿಷ್ಕೃತ ಮಾಹಿತಿ ಇಲ್ಲಿ ನೋಡಬಹುದು.
0 ಕಾಮೆಂಟ್‌ಗಳು