Fact India

Fact India
Fact India: ನಕಲಿ ಸುದ್ದಿ ಹಾವಳಿಯ ನಡುವೆ ಕನ್ನಡದ ಪ್ರಥಮ ಫ್ಯಾಕ್ಟ್-ಚೆಕ್ ವೆಬ್ ತಾಣ |

Fact Check: ಇದು ಖತಾರ್ ಟಿವಿ ಆ್ಯಂಕರ್ ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಚಿತ್ರ ಅಲ್ಲ

ಮಂಗಳೂರು (ಫ್ಯಾಕ್ಟ್ಇಂಡಿಯಾ ವರದಿ): ಭಾರತದಲ್ಲಿ ಹಿಜಾಬ್ ವಿವಾದ ಹಾಗೂ ಇತ್ತೀಚೆಗೆ ನೂಪುರ್ ಶರ್ಮಾ ವಿವಾದದ ಕುರಿತಾಗಿ ಮಧ್ಯಪೂರ್ವದ ಹಲವಾರು ಮುಸ್ಲಿಂ ರಾಷ್ಟ್ರಗಳು ಭಾರತದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದವು. ಈ ಹಂತದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಬುರ್ಖಾಧಾರಿ ಆ್ಯಂಕರ್ ಒಬ್ಬಾಕೆಯ ಚಿತ್ರವು ವೈರಲ್ ಆಗುತ್ತಿದೆ. ಬುರ್ಖಾಧಾರಿ ಆ್ಯಂಕರ್, ಖತಾರ್‌ನ ಪ್ರಖ್ಯಾತ ಸುದ್ದಿ ಆ್ಯಂಕರ್ ಆಗಿರುವ ಫಾತಿಮಾ ಶೇಖ್ ಎಂದು ಕರೆಯಲಾಗಿದ್ದು, ಆಕೆ ಭಾರತದಲ್ಲಿರುವ ಧಾರ್ಮಿಕ ಸ್ವಾತಂತ್ರ್ಯದ ಕುರಿತು ಬುರ್ಖಾ ಧರಿಸಿಯೇ ಕಳವಳ ವ್ಯಕ್ತಪಡಿಸುತ್ತಿದ್ದಾಳೆ ಎಂಬರ್ಥದಲ್ಲಿ ಸಾಕಷ್ಟು ಪೋಸ್ಟ್‌ಗಳು ಕಂಡುಬರುತ್ತವೆ.

ಈ ಕುರಿತು ಫ್ಯಾಕ್ಟ್ಇಂಡಿಯಾ ತನಿಖೆ ನಡೆಸಿದಾಗ, ಈ ಚಿತ್ರ ಮತ್ತು ಪೋಸ್ಟ್ ದಾರಿತಪ್ಪಿಸುವ ಮಾಹಿತಿಯನ್ನು ಒಳಗೊಂಡಿದೆ ಎಂಬುದು ಬಯಲಿಗೆ ಬಂದಿದೆ. ಮತ್ತು ಈ ಚಿತ್ರವು ಖತಾರ್‌ನ ಪ್ರಖ್ಯಾತ ಆ್ಯಂಕರ್ ಫಾತಿಮಾ ಅವರದ್ದಲ್ಲ, ಬದಲಾಗಿ ಈ ಚಿತ್ರವು ಅಫ್ಘಾನಿಸ್ತಾನದ ನ್ಯೂಸ್ ಆ್ಯಂಕರ್ ಖತೀರಾ ಅಹ್ಮದಿ ಎಂಬಾಕೆಯದು ಎಂಬುದೂ ಗೊತ್ತಾಗಿದೆ.

ಆಸಕ್ತಿದಾಯಕ ಸತ್ಯ ಸುದ್ದಿಗಳಿಗಾಗಿ ನಮ್ಮನ್ನು ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲಿ ಫಾಲೋ ಮಾಡಿ.

ಕ್ಲೇಮ್ ಏನು?

ಖತಾರ್‌ನ ಟಿವಿ ಆ್ಯಂಕರ್ ಫಾತಿಮಾ ಶೇಖ್ ಅವರು ರಾಷ್ಟ್ರೀಯ ಟಿವಿಯಲ್ಲಿ "ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಕುರಿತು ಕಳವಳ ವ್ಯಕ್ತಪಡಿಸುತ್ತಿರುವ ದೃಶ್ಯ" ಎಂಬ ಒಕ್ಕಣೆಯಲ್ಲಿ ಚಿತ್ರವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಫೇಸ್‌ಬುಕ್ ಬಳಕೆದಾರ ಮೂಲ್‌ಚಂದ್ ದಧೀಚ್ ಎಂಬವರು (ಇದರ ಆರ್ಕೈವ್ ಲಿಂಕ್ ಇಲ್ಲಿದೆ) ಕೂಡ ಇದನ್ನು ಹಂಚಿಕೊಂಡಿದ್ದರು. ಟ್ವಿಟರ್ ಬಳಕೆದಾರ ಅಡ್ವೈಸರ್ ಝೈಡು ಎಂಬ ಹೆಸರಿನ ಬಳಕೆದಾರರೂ ಅದನ್ನು ಇಲ್ಲಿ ಹಂಚಿಕೊಂಡಿದ್ದರು.

ತನಿಖೆ

ಈ ವೈರಲ್ ವಿಷಯದ ಹಿಂದಿರುವ ಸತ್ಯಾಂಶವೇನೆಂಬುದರ ಬೆನ್ನು ಹತ್ತಲು ಆರಂಭಿಸಿದ ಫ್ಯಾಕ್ಟ್ಇಂಡಿಯಾ ತಾಣವು, ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಟೂಲ್ ಮೂಲಕ ಇದೇ ಚಿತ್ರ ಬೇರೆ ಎಲ್ಲೆಲ್ಲ ಬಳಕೆಯಾಗಿದೆ ಎಂಬುದನ್ನು ಪತ್ತೆ ಹಚ್ಚಲು ಆರಂಭಿಸಿತು. ಈ ಸಂದರ್ಭದಲ್ಲಿ, ಫೋಟೋ ಹಂಚುವ ಅಧಿಕೃತ ತಾಣವಾಗಿರುವ AP ಇಮೇಜಸ್‌ನಲ್ಲಿ ಈ ಚಿತ್ರ ಸಿಕ್ಕಿತು. ಅದರಲ್ಲಿರುವ ಕ್ಯಾಪ್ಷನ್‌ನಲ್ಲಿ ಈ ಚಿತ್ರ ಯಾರದು ಎಂಬ ಮಾಹಿತಿ ಇದೆ.

ಅದರ ಪ್ರಕಾರ, ತಾಲಿಬಾನ್ ಆಡಳಿತದ ಅಫ್ಘಾನಿಸ್ತಾನದಲ್ಲಿ ಟಿವಿ ಮಹಿಳಾ ಆ್ಯಂಕರ್‌ಗಳು ಕೂಡ ಮುಖ ಮುಚ್ಚುವ ಉಡುಗೆ ಧರಿಸಬೇಕು (ಬುರ್ಖಾ ಧರಿಸಬೇಕು) ಎಂಬ ಆದೇಶವನ್ನು ಹೊರಡಿಸಿದ ಸಂದರ್ಭದಲ್ಲಿ, 'ಟೋಲೋ ನ್ಯೂಸ್' ಟಿವಿ ಆ್ಯಂಕರ್ ಖತೀರಾ ಅಹ್ಮದಿ ಅವರು ಮುಖಮುಚ್ಚಿಕೊಳ್ಳುವ ಸಂದರ್ಭ ತಲೆ ತಗ್ಗಿಸಿರುವ ದೃಶ್ಯ ಎಂದು ಬರೆಯಲಾಗಿದೆ. ಎಪಿ ಚಿತ್ರವನ್ನು ಸೆರೆಹಿಡಿದವರು ಎಬ್ರಾಹಿಂ ನೂರೂಝಿ ಎಂಬ ಫೋಟೋಗ್ರಾಫರ್.


ಮತ್ತಷ್ಟು ಕೀವರ್ಡ್‌ಗಳೊಂದಿಗೆ ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಹುಡುಕಾಡಿದೆವು. ಟೋಲೋ ನ್ಯೂಸ್‌ನ ನಿರ್ದೇಶಕರಾದ ಸಾದ್ ಮೊಹ್ಸೆನಿ ಅವರ ಅಧಿಕೃತ ಟ್ವಿಟರ್ ಖಾತೆ ಸಿಕ್ಕಿತು. ಅದರಲ್ಲಿ 2022ರ ಮೇ 25ರಂದು ಹಂಚಿಕೊಳ್ಳಲಾದ ಚಿತ್ರದ ಪ್ರಕಾರ, ಇದು ಅವರ ನ್ಯೂಸ್ ಆ್ಯಂಕರ್ ಖತೀರಾ ಅಹ್ಮದಿ ಅವರು ಬುಲೆಟಿನ್ ಪ್ರಸಾರಕ್ಕೆ ಸಿದ್ಧವಾಗುತ್ತಿರುವ ದೃಶ್ಯ ಎಂದು ಬರೆಯಲಾಗಿತ್ತು. ಮತ್ತು ಮುಖ ಮುಚ್ಚಿಕೊಂಡಾಗ ಉಸಿರಾಡುವುದೂ ಕಷ್ಟ ಎಂದೂ ಹೇಳಲಾಗಿತ್ತು.

ಇಲ್ಲಿದೆ ಅದರ ಲಿಂಕ್.

ಅಂತಿಮ ತೀರ್ಮಾನ

ಇದು ಭಾರತದ ಧಾರ್ಮಿಕ ಸ್ವಾತಂತ್ರ್ಯದ ಕುರಿತು ಕಳವಳ ವ್ಯಕ್ತಪಡಿಸುತ್ತಿರುವ ಖತಾರ್ ಟಿವಿ ಆ್ಯಂಕರ್ ಫಾತಿಮಾ ಶೇಖ್‌ರ ಚಿತ್ರ ಅಲ್ಲ. ಬದಲಾಗಿ, ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಹೇರಿದ ನಿರ್ಬಂಧಗಳ ಬಳಿಕ ಸುದ್ದಿ ಬುಲೆಟಿನ್ ಓದಲು ಸಿದ್ಧವಾಗುತ್ತಿರುವ ಟೋಲೋ ನ್ಯೂಸ್ ಆ್ಯಂಕರ್ ಖತೀರಾ ಅಹ್ಮದಿ ಅವರದು. ಚಿತ್ರ ಒರಿಜಿನಲ್ ಆಗಿದ್ದರೂ, ಅದರ ಜೊತೆ ಹಂಚಿಕೊಂಡ ಮಾಹಿತಿ ಸುಳ್ಳು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು