Fact India

Fact India
Fact India: ನಕಲಿ ಸುದ್ದಿ ಹಾವಳಿಯ ನಡುವೆ ಕನ್ನಡದ ಪ್ರಥಮ ಫ್ಯಾಕ್ಟ್-ಚೆಕ್ ವೆಬ್ ತಾಣ |

Fact Check: ದ್ರೌಪದಿ ಮುರ್ಮು ಆರೆಸ್ಸೆಸ್ ಕಚೇರಿ ಭೇಟಿಯ ನಕಲಿ ಚಿತ್ರ ಹಂಚಿಕೊಂಡ ಪ್ರಶಾಂತ್ ಭೂಷಣ್, ಕಾಂಗ್ರೆಸಿಗರು

ಆಮ್ ಆದ್ಮೀ ಪಾರ್ಟಿಯ ಬೆಂಬಲಿಗ ಮುಖಂಡ, ಸುಪ್ರೀಂ ಕೋರ್ಟ್ ವಕೀಲ ಪ್ರಶಾಂತ್ ಭೂಷಣ್ ಇತ್ತೀಚೆಗೆ ಒಂದು ಫೋಟೋ ಹಂಚಿಕೊಂಡು, ಎನ್‌ಡಿಎಯ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರು ನಾಗ್ಪುರದ ಆರೆಸ್ಸೆಸ್ ಕಚೇರಿಯಲ್ಲಿ ಆರೆಸ್ಸೆಸ್ ಮುಖಂಡ ಮೋಹನ್ ಭಾಗವತ್ ಅವರನ್ನು ಭೇಟಿಯಾಗಿದ್ದಾರೆ ಎಂಬ ಚಿತ್ರವೊಂದನ್ನು ಹಂಚಿಕೊಂಡಿದ್ದರು. ಇದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿ, ಬಿಜೆಪಿಯು ಆರೆಸ್ಸೆಸ್ ಅಜೆಂಡಾವನ್ನು ರಾಷ್ಟ್ರಪತಿ ಸ್ಥಾನದ ಮೇಲೂ ಕೂರಿಸಲು ಸಿದ್ಧವಾಗಿದೆ ಎಂದೆಲ್ಲ ಭಾರಿ ಟೀಕೆಗೆ ಕಾರಣವಾಗಿತ್ತು. ಇಷ್ಟೇ ಅಲ್ಲದೆ, ದ್ರೌಪದಿ ಮುರ್ಮು ಅವರ ಹೆಸರಲ್ಲಿ ತೆರೆಯಲಾದ ನಕಲಿ ಖಾತೆಯಲ್ಲಿ ಕೂಡ 'ನಮ್ಮನ್ನು ಆರೆಸ್ಸೆಸ್ ಕಚೇರಿಯೇ ಮುನ್ನಡೆಸುತ್ತದೆ' ಎಂಬರ್ಥದಲ್ಲಿ ಪೋಸ್ಟ್ ಮಾಡಿ, ಇದೇ ಚಿತ್ರವನ್ನು ಹಂಚಿಕೊಳ್ಳಲಾಗಿತ್ತು. ಇದರ ಲಿಂಕ್ ಇಲ್ಲಿದೆ

ಆದರೆ ಈ ಕುರಿತು ಫ್ಯಾಕ್ಟ್ ಇಂಡಿಯಾ ಡಾಟ್ ಇನ್, ಸತ್ಯಾಂಶ ಪರಿಶೀಲನೆ ನಡೆಸಿತು.

ಆಸಕ್ತಿದಾಯಕ ಸತ್ಯ ಸುದ್ದಿಗಳಿಗಾಗಿ ನಮ್ಮನ್ನು ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲಿ ಫಾಲೋ ಮಾಡಿ.

ಪ್ರಶಾಂತ್ ಭೂಷಣ್ ಅವರು ಈ ಪೋಸ್ಟ್ ಅನ್ನು ಫೇಸ್‌ಬುಕ್‌ನಲ್ಲಿ, ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರಾದರೂ, ಅದರ ಸ್ಕ್ರೀನ್ ಶಾಟ್‌ಗಳು ಈಗಾಗಲೇ ಸಾಕಷ್ಟು ಕಡೆ (ಇಲ್ಲೊಂದಿದೆ) ಹರಿದಾಡುತ್ತಿವೆ. ದೀಪು ಗುಪ್ತಾ ಎಂಬ ಕಾಂಗ್ರೆಸ್ ಮುಖಂಡ ಕೂಡ ಇದೇ ರೀತಿ ಟ್ವೀಟ್ ಶೇರ್ ಮಾಡಿಕೊಂಡಿದ್ದರು. ಅದರ ಲಿಂಕ್ ಇಲ್ಲಿದೆ. ಆ ಬಳಿಕ ಪ್ರಶಾಂತ್ ಭೂಷಣ್ ಆ ಪೋಸ್ಟನ್ನು ಅಳಿಸಿ, ಮುರ್ಮುವಿನ ಕ್ಷಮೆ ಕೇಳಿದ್ದಾರೆ (ಇಲ್ಲಿದೆ ಅದರ ಲಿಂಕ್).

ಅವರು ಮಾಡಿದ ತಪ್ಪು ಪೋಸ್ಟ್‌ನ ಅರ್ಕೈವ್ ಮಾಡಲಾದ ಪುಟದ ಲಿಂಕ್ ಇಲ್ಲಿದೆ.

ಕ್ಲೇಮ್

ಎನ್‌ಡಿಎಯ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರು ನಾಗ್ಪುರದ ಆರೆಸ್ಸೆಸ್ ಕಚೇರಿಯಲ್ಲಿ ಆರೆಸ್ಸೆಸ್ ಮುಖಂಡ ಮೋಹನ್ ಭಾಗವತ್ ಅವರನ್ನು ಭೇಟಿಯಾಗಿದ್ದಾರೆ ಎಂದು ಪ್ರಶಾಂತ್ ಭೂಷಣ್ ಅವರು ಹಂಚಿಕೊಂಡಿದ್ದರು.

ಸತ್ಯಾಂಶವೇನು?

ಈ ಕುರಿತು ಫ್ಯಾಕ್ಟ್ಇಂಡಿಯಾ ತಾಣವು, ತನಿಖೆಗೆ ನಿಶ್ಚಯಿಸಿತು. ದ್ರೌಪದಿ ಮುರ್ಮು ಅವರು ಪ್ರಧಾನಿ ನರೇಂದ್ರ ಮೋದಿ ಆಯ್ಕೆ ಮಾಡಿದ ರಾಷ್ಟ್ರಪತಿ ಅಭ್ಯರ್ಥಿಯಾಗಿದ್ದು, ಅವರ ಇಂಥಹ ಯಾವುದೇ ನಡೆಗಳನ್ನು ಖಂಡಿತವಾಗಿಯೂ ಯಾವುದೇ ವಿಶ್ವಾಸಾರ್ಹ ಸುದ್ದಿ ಸಂಸ್ಥೆಗಳು ಪ್ರಕಟಿಸುತ್ತವೆ. ಅಂಥ ಯಾವುದೇ ಸುದ್ದಿಯೂ ಎಲ್ಲಿಯೂ ಕಂಡುಬಂದಿಲ್ಲ. ಹೀಗಾಗಿ, ಈ ಚಿತ್ರವನ್ನು ಸರಳವಾದ ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಟೂಲ್ ಬಳಸಿ, ಇಂಥ ಚಿತ್ರವು ಎಲ್ಲೆಲ್ಲ ಬಳಕೆಯಾಗಿದೆ ಎಂಬುದಕ್ಕೆ ಫ್ಯಾಕ್ಟ್ಇಂಡಿಯಾ ಡಾಟ್ ಇನ್ ತಾಣವು ಹುಡುಕಾಟ ನಡೆಸಿತು.

ಆಗ ಪ್ರಮುಖವಾಗಿ ಎರಡು ಚಿತ್ರಗಳು ಗೋಚರಿಸಿದವು.

ಒಂದನೆಯದು, ಆರೆಸ್ಸೆಸ್ ಸಂಸ್ಥೆಯು ತನ್ನ ಟ್ವಿಟರ್ ಹಾಗೂ ವೆಬ್ ತಾಣದಲ್ಲಿ ಬಳಸಿಕೊಂಡಿದ್ದ ಈ ಫೋಟೋ. 

ಗುಜರಾತ್‌ನ ಕರ್ಣಾವತಿಯಲ್ಲಿ 2022ರ ಮಾರ್ಚ್ 11ರಂದು ನಡೆದ ಆರೆಸ್ಸೆಸ್ ಅಖಿಲ ಭಾರತೀಯ ಪ್ರತಿನಿಧಿ ಸಭಾ ಕಾರ್ಯಕ್ರಮದ ಫೋಟೋವನ್ನು ಆರೆಸ್ಸೆಸ್ ತನ್ನ ಟ್ವಿಟರ್ ತಾಣದಲ್ಲಿ ಇಲ್ಲಿ ಹಂಚಿಕೊಂಡಿತ್ತು. ಅವರ ವೆಬ್ ತಾಣದಲ್ಲಿಯೂ ಇದೇ ಚಿತ್ರ ಇದೆ.

ಎರಡನೆಯದು, 2020ರ ಡಿಸೆಂಬರ್ 29ರಂದು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೋರೆನ್ ಅವರು ತಮ್ಮ ಟ್ವಿಟರ್ ತಾಣದಲ್ಲಿ ಇಲ್ಲಿ ಹಂಚಿಕೊಂಡಿದ್ದ ಫೋಟೋ. ಅವರ ಜಾರ್ಖಂಡ್ ಸರಕಾರವು ಒಂದು ವರ್ಷ ಪೂರ್ಣಗೊಳಿಸಿದ ಸಂದರ್ಭದಲ್ಲಿ ಅವರು ಅಂದಿನ ಜಾರ್ಖಂಡ್ ರಾಜ್ಯಪಾಲರಾಗಿದ್ದ ದ್ರೌಪದಿ ಮುರ್ಮು ಅವರನ್ನು ರಾಜಭವನದಲ್ಲಿ ಭೇಟಿಯಾಗಿ ಗೌರವ ವಂದನೆ ಸಲ್ಲಿಸುತ್ತಿದ್ದ ಸಂದರ್ಭದ ಫೋಟೋ ಅದು.

ಮೇಲಿನ ಸಾಲಿನಲ್ಲಿ ಮೂಲ ಫೋಟೋಗಳು, ಹಾಗೂ ಕೆಳ ಸಾಲಿನಲ್ಲಿ ತಿರುಚಿದ ಫೋಟೋ. ವ್ಯತ್ಯಾಸ ಗಮನಿಸಿ.

ಇವೆರಡನ್ನು ಕೂಡ ಫೋಟೋ ಎಡಿಟಿಂಗ್ ತಂತ್ರಜ್ಞಾನ ಬಳಸಿ ಫ್ಲಿಪ್ ಮಾಡಲಾಗಿತ್ತು. ಅಂದರೆ, ದ್ರೌಪದಿ ಮುರ್ಮು ಅವರು ಗುಜರಾತಿ ಮಹಿಳೆಯರಂತೆ ಸೀರೆಯ ಸೆರಗು ಹಾಕಿಕೊಂಡಂತೆ ಕಾಣುತ್ತಿತ್ತು. ವಾಸ್ತವವಾಗಿ ಅವರು ಎಡ ಭುಜಕ್ಕೇ ಸೆರಗು ಹಾಕಿಕೊಳ್ಳುತ್ತಾರೆ. ಫ್ಲಿಪ್ ಮಾಡಿದಾಗ ಅದು ಬದಲಾಗುತ್ತದೆ. ಇದು ಒಂದು ಸಂಶಯಕ್ಕೆ ಕಾರಣವಾದ ಅಂಶ.

ಎರಡನೆಯದು, ಮೋಹನ್ ಭಾಗವತ್ ಅವರು ಭಾರತ ಮಾತೆಗೆ ವಂದಿಸುವ ಚಿತ್ರ. ಇದರಲ್ಲಿ ಭಾರತ ಮಾತೆಯ ಬಲ ಕೈಯಲ್ಲಿ ಭಗವಾಧ್ವಜವಿದೆ. ಭಾರತದ ನಕ್ಷೆಯಲ್ಲಿ ಶ್ರೀಲಂಕಾ ಎಡಭಾಗದಲ್ಲಿ ಗೋಚರಿಸುತ್ತಿದೆ. ಮತ್ತು ಭಾರತದ ನಕ್ಷೆಯೂ ಕನ್ನಡಿಯಲ್ಲಿ ನೋಡಿದಂತೆ ಭಾಸವಾಗುತ್ತಿದೆ.

ಎರಡೂ ಚಿತ್ರಗಳನ್ನು ವಿಶ್ಲೇಷಣೆಗೊಳಪಡಿಸಿದಾಗ, ಇವೆರಡು ಕೂಡ ತಿದ್ದಲಾದ ಚಿತ್ರಗಳೆಂಬುದು ಗಮನಕ್ಕೆ ಬಂತು. ಅಂದರೆ ಚಿತ್ರ ಎಡಿಟ್ ಮಾಡುವ ತಂತ್ರಾಂಶ ಬಳಸಿ, ಎರಡೂ ಚಿತ್ರಗಳನ್ನು ಫ್ಲಿಪ್ ಮಾಡಿ, ಬಳಿಕ ಭಾಗವತ್ ಅವರು ಭಾರತ ಮಾತೆಗೆ ನಮಿಸುವ ಚಿತ್ರವನ್ನೂ ಫ್ಲಿಪ್ ಮಾಡಿ, ಅದಕ್ಕೆ ದ್ರೌಪದಿ ಮುರ್ಮು ಅವರ ಚಿತ್ರವನ್ನು ಕ್ರಾಪ್ ಮಾಡಿ, ಜೋಡಿಸಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ.

ಅಂತಿಮ ತೀರ್ಮಾನ

ಹೀಗಾಗಿ, ಪ್ರಶಾಂತ್ ಭೂಷಣ್ ಮತ್ತಿತತರರು ದುರುದ್ದೇಶಪೂರ್ವಕವಾಗಿಯೇ ಈ ತಪ್ಪು/ಸುಳ್ಳು ಬಿಂಬಿಸುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ಪ್ರಶಾಂತ್ ಭೂಷಣ್ ಮತ್ತಿತತರರು ಹಂಚಿಕೊಂಡಿರುವ ಈ ಚಿತ್ರವು ಫೇಕ್ ಎಂಬುದು ಸ್ಪಷ್ಟವಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು