Fact India

Fact India
Fact India: ನಕಲಿ ಸುದ್ದಿ ಹಾವಳಿಯ ನಡುವೆ ಕನ್ನಡದ ಪ್ರಥಮ ಫ್ಯಾಕ್ಟ್-ಚೆಕ್ ವೆಬ್ ತಾಣ |

ಫ್ಯಾಕ್ಟ್ ಚೆಕ್: ಕಾಂಗ್ರೆಸ್-ಬಿಜೆಪಿ ರಹಸ್ಯ ಸಭೆ ನಡೆಯಿತೇ?


ಹೊಸದೆಹಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧರಿ, ಲೋಕಸಭಾ ಸ್ಪೀಕರ್ ಓಂಪ್ರಕಾಶ್ ಬಿರ್ಲಾ ಇವರೆಲ್ಲರಿದ್ದ ಚಿತ್ರವೊಂದು ವೈರಲ್ ಆಗಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ನಡೆದ ರಹಸ್ಯ ಸಭೆಯ ಚಿತ್ರವಿದು ಎಂಬ ಅಡಿಬರಹ ನೀಡಲಾಗಿದೆ. ಈ ಕುರಿತು ಫ್ಯಾಕ್ಟ್‌ಇಂಡಿಯಾ.ಇನ್ ತಾಣವು ಫ್ಯಾಕ್ಟ್ ಚೆಕ್ ಮಾಡಿದ್ದು, ಇದು 2021ರ ಆಗಸ್ಟ್ ತಿಂಗಳಲ್ಲಿ ತೆಗೆದ ಚಿತ್ರವೆಂಬುದು ಸಾಬೀತಾಗಿದೆ.

ಆಸಕ್ತಿದಾಯಕ ಸತ್ಯ ಸುದ್ದಿಗಳಿಗಾಗಿ ನಮ್ಮನ್ನು ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲಿ ಫಾಲೋ ಮಾಡಿ.

ಫೇಕ್ ವಿಷಯ ಏನು?
ಜನವರಿ 17ರಂದು ಸಾಮಾಜಿಕ ಜಾಲತಾಣದಲ್ಲಿ, ಬಳಕೆದಾರರೊಬ್ಬರು, ಇದು ಬಿಜೆಪಿ-ಕಾಂಗ್ರೆಸ್ ರಹಸ್ಯ ಸಭೆ ಎಂಬ ಅಡಿಬರಹದೊಂದಿಗೆ ಪ್ರಶ್ನಾರ್ಥಕ ಚಿಹ್ನೆ ಹಾಕಿ ಈ ಚಿತ್ರ ಶೇರ್ ಮಾಡಿದ್ದರು.

ಟ್ವಿಟರ್‌ನಲ್ಲೂ ಕೆಲವು ಬಳಕೆದಾರರು ಇದೇ ಮಾದರಿಯ ಚಿತ್ರಗಳನ್ನು ಹರಿಯಬಿಟ್ಟಿದ್ದರು.


ತನಿಖೆ ಮಾಡಿದ್ದು ಹೇಗೆ?
ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಟೂಲ್ ಬಳಸಿದ ಫ್ಯಾಕ್ಟ್‌ಇಂಡಿಯಾ ತಾಣವು, ಈ ಚಿತ್ರದ ಸತ್ಯಾಸತ್ಯತೆ ಪರಿಶೀಲಿಸಲು ಮುಂದಾಯಿತು.

ಗೂಗಲ್‌ನಲ್ಲಿ ಹುಡುಕಿದಾಗ ಇದೇ ಚಿತ್ರವು ಸಾಕಷ್ಟು ಕಡೆಗಳಲ್ಲಿ, ವೆಬ್ ತಾಣಗಳಲ್ಲಿ, ಸುದ್ದಿ ಮಾಧ್ಯಮಗಳಲ್ಲಿ ಪೋಸ್ಟ್ ಆಗಿರುವುದು ಗಮನಕ್ಕೆ ಬಂದಿತು.

ಉದಾಹರಣೆಗೆ, ಫೈನಾನ್ಷಿಯಲ್ ಎಕ್ಸ್‌ಪ್ರೆಸ್ ತಾಣದಲ್ಲಿ ಇದೇ ಫೋಟೋ ಇಲ್ಲಿ ಪ್ರಕಟವಾಗಿದ್ದು, ಇದು 2021ರ ಆಗಸ್ಚ್ ತಿಂಗಳ 12ರಂದು ಪೋಸ್ಟ್ ಆಗಿದೆ. ಅದರಲ್ಲಿರುವ ಸುದ್ದಿಯ ಪ್ರಕಾರ, 2021ರ ಆಗಸ್ಟ್ 11ರಂದು ಪ್ರಧಾನಿ ಮೋದಿ, ಅಮಿತ್ ಶಾ, ಸೋನಿಯಾ ಗಾಂಧಿ ಮತ್ತಿತರ ಮುಖಂಡರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು.

ತನಿಖೆಯನ್ನು ಮತ್ತೂ ಮುಂದುವರಿಸಿದಾಗ, ಓಂ ಬಿರ್ಲಾ ಅವರ ಟ್ವಿಟರ್ ಖಾತೆಯಲ್ಲಿ ವಿಡಿಯೊ ಒಂದು ಪೋಸ್ಟ್ ಆಗಿರುವುದು ಗಮನಕ್ಕೆ ಬಂದಿತು.
ಅದರ ಅನುಸಾರ, ಲೋಕಸಭೆ ಕಲಾಪವು ಅನಿಶ್ಚಿತಾವಧಿಗೆ ಮುಂದೂಡವಲಾದ ಸಂದರ್ಭದಲ್ಲಿ, ಎಲ್ಲ ಪಕ್ಷಗಳ ಮುಖಂಡರನ್ನು ಕರೆದು, ಜನರ ಸಮಸ್ಯೆಗಳ ನಿವಾರಣೆಯ ಕುರಿತು ಸದನದಲ್ಲಿ ಚರ್ಚೆಯಾಗಬೇಕಿದೆ ಎಂದು ವೃಥಾ ಗಲಾಟೆ ಎಬ್ಬಿಸುವ ರಾಜಕೀಯ ಮುಖಂಡರಿಗೆ ತಿಳಿಹೇಳಲಾದ ಸಂದರ್ಭವದು.

ಅಂತಿಮ ತೀರ್ಮಾನ
ನಮ್ಮ ತನಿಖೆಯಲ್ಲಿ ತಿಳಿದುಬಂದ ಪ್ರಕಾರ, ಸೋನಿಯಾ ಗಾಂಧಿ, ಮೋದಿ, ಬಿರ್ಲಾ, ಚೌಧರಿ ಮುಂತಾದವರಿದ್ದ ಚಿತ್ರವು ನಿಜವೇ ಆಗಿದ್ದರೂ, ಅದರಲ್ಲಿದ್ದ ವಿಷಯ ದಾರಿತಪ್ಪಿಸುವಂತಿದೆ. 2021ರ ಸರ್ವಪಕ್ಷ ಸಭೆಯಲ್ಲಿ ತೆಗೆಯಲಾದ ಚಿತ್ರ ಇದಾಗಿದ್ದು, ಪ್ರಸ್ತುತ, ಬಿಜೆಪಿ-ಕಾಂಗ್ರೆಸ್ ರಹಸ್ಯ ಸಭೆ ಎಂಬ ಸುಳ್ಳು ಕ್ಲೇಮ್ ಜೊತೆ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು